ಪೆರಡಾಲದಲ್ಲಿ ಗೆಳೆಯರ ಕೂಟ ಉದ್ಘಾಟನೆ
0
ಫೆಬ್ರವರಿ 21, 2019
ಬದಿಯಡ್ಕ: ವಿಶೇಷಚೇತನ ಮಕ್ಕಳಿಗೆ ಶಿಕ್ಷಣ ಅಗತ್ಯದ ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ.ಪ್ರೋತ್ಸಾಹ ನೀಡಿದಾಗ ಮುಂದೆ ಅವರು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಬಲ್ಲರು ಎಂದು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ನುಡಿದರು.
ಪೆರಡಾಲ ಸರಕಾರಿ ಪ್ರೌಢಶಾಲಾ ವತಿಯಿಂದ ವಿಶೇಷಚೇತನ ವಿದ್ಯಾರ್ಥಿ ಅಶ್ಪಾಕ್ ನ ಮನೆಯಲ್ಲಿ ಏರ್ಪಡಿಸಿದ ಗೆಳೆಯರ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾಮಕ್ಕಳು ಮಗುವಿನ ಮನೆಗೆ ತೆರಳುವುದರಿಂದ ಅವನಿಗೆ ಕಲಿಕಾ ಆಸಕ್ತಿ ಹೆಚ್ಚಬಹುದು. ತನಗೆ ಗೆಳೆಯರಿದ್ದಾರೆಂಬ ಸಂತೋಷ ಉಂಟಾಗಬಹುದು.ಇದೊಂದು ಉತ್ತಮ ಕಾರ್ಯ ಎಂದು ಅವರು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕ ರಾಜಗೋಪಾಲ ಮಾತನಾಡಿ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಕಲಿಯುವ ಸೌಕರ್ಯ ಏರ್ಪಡಿಸಲಾಗುವುದೆಂದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ,ಉಪಾಧ್ಯಕ್ಷ ರಾಮ ಶುಭಾಶಂಶನೆಗೈದು ಮಗುವಿಗೆ ಬಹುಮಾನವಿತ್ತರು. ವಿಶೇಷ ಮಕ್ಕಳ ತರಬೇತುದಾರ ಗಿರೀಶ್ ಸ್ವಾಗತಿಸಿ, ಕಾರ್ಯಕ್ರಮದ ವಿವರಣೆಯಿತ್ತರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಚಂದ್ರಹಾಸ ನಂಬಿಯಾರ್ ವಂದಿಸಿದರು. ಪ್ರಮೋದ ಕುಮಾರ್,ಸೀಮಂತಿನಿ ವಿವಿಧ ಚಟುವಟಿಕೆ ನಿರ್ವಹಿಸಿದರು.ಮಕ್ಕಳು ಹಾಡು,ಕಥೆಯೊಂದಿಗೆ ಮಗುವಿನ ಜೊತೆ ಕಲಿಕಾ ಅನುಭವ ಹಂಚಿಕೊಂಡರು.

