ಇಂದಿನ ಟಿಪ್ಪಣಿ
೧. ‘ಕರಣ’ ಗಣದಿ ಕಿರಿಕಿರಿಂಗಣ...
‘ಕರಣ’ ಎಂದರೆ ‘ಮಾಡುವುದು’ ಎಂಬ ಸಾಮಾನ್ಯ ಅರ್ಥ ಬರುತ್ತದೆ. ಕರ್ನಾಟಕದ ಏಕೀಕರಣ ಎಂಬ ಒಳ್ಳೆಯ ಉದಾಹರಣೆಯ ಮೂಲಕ ಗಮನಿಸುವುದಾದರೆ, ಕನ್ನಡ ಮಾತನಾಡುವ ಜನರು ನೆಲೆಸಿದ್ದ, ಹರಿದು ಹಂಚಿಹೋಗಿದ್ದ, ವಿವಿಧ ಪ್ರದೇಶಗಳನ್ನು ಒಂದು ಮಾಡುವುದು ಎಂಬ ಅರ್ಥ. ಇಂತಹ ಒಳ್ಳೆಯ ಕೆಲಸವನ್ನು ಆಲೂರು ವೆಂಕಟರಾಯರೇ ಮೊದಲಾದ ಧೀಮಂತ ಕನ್ನಡಿಗರು ಮಾಡಿ ನಮಗೆ ಸುಂದರ ಕರ್ನಾಟಕ ರಾಜ್ಯವನ್ನು ಒದಗಿಸಿಕೊಟ್ಟಿದ್ದಾರೆ. ಏಕೀಕರಣ ಎಂದರೆ ಒಂದು ಮಾಡುವುದು, ಅಥವಾ ಒಂದುಗೂಡಿಸುವುದು ಎನ್ನೋಣ. ಏಕ ಎಂದರೆ ಒಂದು (ಸಂಸ್ಕೃತದಲ್ಲಿ), ಕರಣ ಎಂದರೆ ಮಾಡುವುದು. ಸಂಸ್ಕೃತ ಭಾಷೆಯ ನಿಯಮಗಳಿಂದಾಗಿಏಕಕರಣ ಎನ್ನುವಂತಿಲ್ಲ, ಏಕೀಕರಣ ಎನ್ನಬೇಕು. ಇಂತಹದೇ ಇನ್ನೊಂದು ಶಬ್ದ ಸಮೀಕರಣ. ಇದರ ಅರ್ಥ ಸಮ ಮಾಡುವುದು, ಸಮಾನಗೊಳಿಸುವುದು ಎಂದು. ಹಾಗೆಯೇ, ವರ್ಗೀಕರಣ ಎಂದರೆ ವರ್ಗ(ಗುಂಪು)ಗಳಾಗಿಮಾಡುವುದು. ಇಲ್ಲಿ ಏಕ, ಸಮ, ವರ್ಗ - ಇವೆಲ್ಲ ಸಂಸ್ಕೃತ ಪದಗಳೆಂಬುದನ್ನು ಗಮನಿಸಬೇಕು. ಸಂಸ್ಕೃತ ನಾಮವಿಶೇಷಣ ಪದಗಳೊಂದಿಗೆ ‘ಕರಣ’ ಸೇರುವುದು ವ್ಯಾಕರಣಬದ್ಧ ಪದರಚನೆ.
ಆದರೆ ಈಗ ಒಂದು ಕೆಟ್ಟ ಚಾಳಿ ಶುರುವಾಗಿದೆ. ಸಂಸ್ಕೃತ ನಾಮವಿಶೇಷಣಗಳೇ ಆಗಬೇಕಂತಿಲ್ಲ, ಕನ್ನಡದ ಅಥವಾ ಇಂಗ್ಲಿಷ್ ಪದಗಳಿಗೂ ‘ಕರಣ’ ತೊಡಿಸಿ ಕುಲಗೆಡಿಸುವುದು. ಅದರ ಪರಿಣಾಮವೇ ‘ಸೇತುವೆ ಅಗಲೀಕರಣ’, ‘ಶ್ವಾಸಕೋಶದ ಉದ್ದೀಕರಣ’, ‘ರಸ್ತೆಯ ಡಾಂಬರೀಕರಣ’, ‘ಹಾಲಿನ ಪ್ಯಾಶ್ಚರೀಕರಣ’, ‘ಇಂಗ್ಲಿಷ್ ಸಾಕ್ಷ್ಯಚಿತ್ರಗಳ ಕನ್ನಡೀಕರಣ’ ಮುಂತಾದ ಕಲಬೆರಕೆ ಪದಾರ್ಥಗಳುಳ್ಳ ವಾಕ್ಯಗಳು. ಇನ್ನೂ ಮುಂದುವರಿದು ಕೆಲವು ಪ್ರಭೃತಿಗಳು(ಮತ್ತು ಪತ್ರಕರ್ತರು ಕೂಡ) ‘ರಾಜಕೀಕರಣ’, ‘ಸಮಾಜೀಕರಣ’, ‘ಆರ್ಥಿಕೀಕರಣ’, ‘ತಾಯೀಕರಣ’ ಮುಂತಾದ ಅಸಂಬದ್ಧ ಪದಗಳನ್ನು ಸೃಷ್ಟಿಸಿದ್ದಾರೆ. ಕನ್ನಡ ದಿನಪತ್ರಿಕೆಗಳು ಇವುಗಳನ್ನು ಯದ್ವಾತದ್ವಾ ಬಳಸುತ್ತಿವೆ. ಇವುಗಳನ್ನು ಹುಟ್ಟಿಸಿದ ಪ್ರಭೃತಿಗಳು ಬುದ್ಧಿಯಲ್ಲಿ ಎಷ್ಟು ಅರೆಬೆಂದವುಗಳೋ ಅಷ್ಟೇ ಅರೆಬೆಂದಂಥವು ವ್ಯಾಕರಣರೀತ್ಯಾ ಈ ಪದಗಳು. ಸಾಧ್ಯವಾದಷ್ಟು ಮಟ್ಟಿಗೆ ನಾವು ಇಂಥವನ್ನು ಬಳಸದಿರುವುದು ಒಳ್ಳೆಯದು.
====
೨. ಕ್ರಿಯಾಪದಗಳಿಗೂ ನಾವು ವಚನಬದ್ಧರಾಗಿರಬೇಕು.
`ಪ್ರಚಾರ ಮತ್ತು ಇತರ ಬಾಹ್ಯ ಕಾರಣಗಳು ಕೆಲವೊಮ್ಮೆ ಪುಸ್ತಕವನ್ನು ಮಂಚೂಣಿಗೆ ತರುತ್ತದೆ.'
ಸಾಕಷ್ಟು ಲೇಖನ ಪ್ರಬಂಧ ಕಥೆ-ಕಾದಂಬರಿಗಳನ್ನೂ ಬರೆದಿರುವ, ಪುಸ್ತಕಗಳನ್ನು ಪ್ರಕಟಿಸಿರುವ, ಲೇಖಕರೊಬ್ಬರ ಫೇಸ್ಬುಕ್ ಪ್ರತಿಕ್ರಿಯೆಯಲ್ಲಿ, ಈ ವಾಕ್ಯವನ್ನು ಈಗಷ್ಟೇ ಗಮನಿಸಿದೆ. ಇವತ್ತಿನ ಕಲಿಕೆಯಲ್ಲಿ ಒಂದು ಟಿಪ್ಪಣಿಗೆಸೂಕ್ತ ಸರಕು ಎಂದೆನಿಸಿ ಎತ್ತಿಕೊಂಡಿದ್ದೇನೆ.
ಒಂದನೆಯದಾಗಿ ‘ಮಂಚೂಣಿ’ ಎಂಬ ಪದಬಳಕೆ ತಪ್ಪು. ಅದು ಮುಂಚೂಣಿ ಆಗಬೇಕು. ಮೊದಲು, ಅಥವಾ ಮುಂಭಾಗ ಎಂದು ಅರ್ಥ. ಮುಂದು, ಮುಂಗಡ, ಮುಂಭಾಗ, ಮುನ್ನಡೆ ಇತ್ಯಾದಿಯಲ್ಲಿರುವ ’ಮುಂ’ ದಿಂದಲೇ‘ಮುಂಚೂಣಿ’ ಸಹ ಬಂದಿರುವುದು.
ಇನ್ನೊಂದು ತಪ್ಪು ‘ಪ್ರಚಾರ ಮತ್ತು ಇತರ ಬಾಹ್ಯ ಕಾರಣಗಳು’ ಎಂದು ಬಹುವಚನದ ನಾಮಪದ ಇರುವಾಗ ವಾಕ್ಯದಲ್ಲಿನ ಕ್ರಿಯಾಪದವೂ ಬಹುವಚನ ರೂಪದಲ್ಲಿಯೇ ಇರಬೇಕು. ಹಾಗಾಗಿ, ‘ತರುತ್ತದೆ’ ಸರಿಯಲ್ಲ, ‘ತರುತ್ತವೆ’ ಎಂದಾಗಬೇಕು.
ಹೈನುಪದಾರ್ಥಗಳನ್ನು ಮಾರುವ ಅಂಗಡಿಯ ಫಲಕವು ‘ಇಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ ಸಿಗುತ್ತದೆ’ ಅಲ್ಲ, ‘ಇಲ್ಲಿ ಹಾಲು ಮೊಸರು ಬೆಣ್ಣೆ ತುಪ್ಪ ಸಿಗುತ್ತವೆ’ ಎಂದು ಇರಬೇಕು.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಅದ್ದೂರಿ (ವೈಭವವುಳ್ಳದ್ದು) ಸರಿ. ‘ಅದ್ಧೂರಿ’ ರೂಢಿಯಲ್ಲಿದೆಯಾದರೂ ಶುದ್ಧವಲ್ಲ.
ಆ) ವೈಡೂರ್ಯ (ನವರತ್ನಗಳಲ್ಲೊಂದು) ಸರಿ. ವೈಢೂರ್ಯ ತಪ್ಪು.
ಇ) ಮರ್ದಿನಿ (ಮಹಿಷಾಸುರಮರ್ದಿನಿ) ಸರಿ. ಮರ್ಧಿನಿ ತಪ್ಪು.
ಈ) ಪತಿತ (ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ) ಸರಿ. ಪತಿತ ಎಂದರೆ ಕೆಳಗೆ ಬಿದ್ದ ಎಂದು ಅರ್ಥ. ಪತೀತ ತಪ್ಪು. (ಪತೀತ ಪಾವನ ಸೀತಾರಾಮ್ ಎಂದೇ ಹಾಡುವವರು ಹೆಚ್ಚು).
ಉ) ವೈಯಕ್ತಿಕ (ಒಬ್ಬ ವ್ಯಕ್ತಿಗೆ ಸಂಬಂಧಿಸಿದ) ಸರಿ. ವೈಯುಕ್ತಿಕ ತಪ್ಪು.
FEEDBACK: samarasasudhi@gmail.com



