ಬದಿಯಡ್ಕ: ಗುಡ್ಡೆ ಕುಸಿತ ಭೀತಿಯುಂಟಾದ ಹಿನ್ನೆಲೆಯಲ್ಲಿ ಚೆರ್ಕಳ ಕಲ್ಲಡ್ಕ ರಸ್ತೆಯ ಬದಿಯಡ್ಕ ಸಮೀಪದ ಕರಿಂಬಿಲಕ್ಕೆ ಶುಕ್ರವಾರ ಭೂಗರ್ಭ ಇಲಾಖೆಯ ಅಧಿಕಾರಿಗಳು ಭೇಟಿನೀಡಿ ಮಾಹಿತಿಯನ್ನು ಕಲೆಹಾಕಿದರು. ಲೋಕೋಪಯೋಗಿ ಇಲಾಖೆಯ ಕಲ್ಲಿಕೋಟೆ ವಿಭಾಗೀಯ ನಿರ್ದೇಶಕ ಶನಿವಾರ ಆಗಮಿಸಿ ಸ್ಥಿತಿಗತಿಗಳ ಅವಲೋಕನ ನಡೆಸಲಿದ್ದಾರೆ. ಅನಂತರವೇ ಗುಡ್ಡೆಯ ಮಣ್ಣು ತೆಗೆಯಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಲಾಗುತ್ತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಇದೇ ವೇಳೆ ಸತತ ನಾಲ್ಕನೇ ದಿನವೂ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ನಿತ್ಯ ಪ್ರಯಾಣಿಕರು ಅನ್ಯದಾರಿಯನ್ನು ಬಳಸಿ ತೆರಳಬೇಕಾಯಿತು. ಖಾಸಗಿ ಬಸ್ಗಳು ಸಂಚಾರವನ್ನೇ ನಿಲ್ಲಿಸಿದ್ದರು. ಸರ್ಕಾರಿ ಬಸ್ಗಳು ಮಾತ್ರ ಕೆಲವೊಂದು ಸೀತಾಂಗೋಳಿ ಪೆರ್ಲ ದಾರಿಯಲ್ಲಿ ಸಂಚರಿಸುತ್ತಿವೆ. ಬದಿಯಡ್ಕದ ಕೆಡೆಂಜಿ ತಿರುವಿನಲ್ಲಿ ರಸ್ತೆಗೆ ತಡೆಯನ್ನಿರಿಸಲಾಗಿದ್ದು, ಅಲ್ಲಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಯಾವುದೇ ವಾಹನಗಳನ್ನು ಪ್ರವೇಶಿಸದಂತೆ ತಡೆಯುತ್ತಿದ್ದು, ಚಾಲಕರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಕಳೆದ ಮೂರು ದಿನಗಳ ಕಾಲ ಪೊಲೀಸರು ಕರ್ತವ್ಯ ನಿರತರಾಗಿರಲಿಲ್ಲವೆಂದು ತಿಳಿದ ಜಿಲ್ಲಾಧಿಕಾರಿಯವರು ಇಲಾಖೆಯ ಅಧಿಕಾರಿಗಳನ್ನೇ ತರಾಟೆಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ವಾಹನ ಸಂಚಾರ ಮೊಟಕುಗೊಂಡು ಬದಿಯಡ್ಕ -ಪೆರ್ಲ ರಸ್ತೆಯ ಸಾರಿಗೆ ಅಡಚಣೆ ಪರಿಹಾರಕ್ಕೆ ಕ್ರಮ ವಿಳಂಬವಾಗುತ್ತಿರುವುದು ಜನರಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಇನ್ನೂ, ವಿಳಂಬವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ನಾಗರಿಕರು ತಿಳಿಸುತ್ತಿದ್ದಾರೆ. ಬದಿಯಡ್ಕದಿಂದ ಪೆರ್ಲ ಮೂಲಕ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಪ್ರಧಾನ ಅಂತರ್ ರಾಜ್ಯ ರಸ್ತೆ ಇದಾಗಿದೆ. ಆದರೆ ಕಾಸರಗೋಡಿನಿಂದ ಪೆರ್ಲಕ್ಕೆ ತೆರಳುವ ಖಾಸಗಿ ಬಸ್ಗಳು ಇದೀಗ ಬದಿಯಡ್ಕದಲ್ಲಿ ಸಂಚಾರ ಕೊನೆಗೊಳಿಸುತ್ತಿವೆ.
ಕೆಎಸ್ಆರ್ಟಿಸಿ ಬಸ್ಗಳು ಸೀತಾಂಗೋಳಿ- ಬಾಡೂರು ಮೂಲಕ ಸುತ್ತಬಳಸಿ ಸಂಚರಿಸಿ ಪೆರ್ಲಕ್ಕೆ ತಲುಪುತ್ತವೆ. ಚೆರ್ಕಳ ಅಡ್ಯನಡ್ಕ ರಸ್ತೆಯ ಮೆಕ್ಕಡಾಂ ಡಾಮರೀಕರಣದಂಗವಾಗಿ ರಸ್ತೆ ಅಗಲಗೊಳಿಸಿದ್ದು, ಆದರೆ ರಸ್ತೆ ಬದಿಯ ಗುಡ್ಡೆಯ ಬದಿಯನ್ನು ಸಮತಟ್ಟುಗೊಳಿಸುವ ಕಾರ್ಯವು ಸಮರ್ಪಕವಾಗಿ ನಡೆಯದಿರುವುದೇ ಈ ಸಮಸ್ಯೆಗೆ ಕಾರಣವೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.



