ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿಯ ಕನ್ಯಪ್ಪಾಡಿಯಲ್ಲಿ ಸಹೋದರರು ಜ್ವರಬಾಧೆಯಿಂದ ಮೃತಪಟ್ಟ ಪ್ರಕರಣದಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಪರಿಣಿತರ ತಂಡ ಪ್ರದೇಶಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು.
ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರಾಜ್ಯ ಎಪಿಡಾಮಿಯಾಲಜಿಸ್ಟ್ ಡಾ.ಎ.ಸುಕುಮಾರನ್ ಅವರ ನೇತೃತ್ವದ ತಂಡ ಜಿಲ್ಲೆಗೆ ಆಗಮಿಸಿದೆ. ಮಣಿಪಾಲ್ ವೈರಾಲಜಿ ಇನ್ಸ್ ಸ್ಟಿಯೂಟ್ ನ ಮೈಕ್ರಾಲಜಿಸ್ಟ್ ಅನೂಪ್ ಜಯರಾಂ, ಎಪಿಡೆಮಿಯಾಲಜಿಸ್ಟ್ ಡಾ.ರೋಬಿನ್ ಎಸ್, ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯ ಜ್ಯೂನಿಯರ್ ಅಡ್ಮಿನಿಸ್ಟ್ರೇಟಿವ್ ಮೆಡಿಕಲ್ ಆಫೀಸರ್ ಡಾ.ರತಿ ರಂಜಿತ್, ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಪ್ಲಾರಿ ಜೋಸೆಫ್ ತಂಡದಲ್ಲಿದ್ದರು.
ಮೃತಪಟ್ಟ ಮಕ್ಕಳು ವಾಸವಾಗಿದ್ದ ಪುತ್ತಿಗೆ ಮುಗು ರಸ್ತೆಯ ಪ್ರದೇಶದ ನೀರು, ಮಣ್ಣು ಸ್ಯಾಂಪಲ್, ಬೆಕ್ಕು, ಆಡುಗಳ ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಸಾರ್ವಜನಿಕರು ಭೀತರಾಗಬೇಕಾದ ಪರಿಸ್ಥಿತಿ ಇಲ್ಲ ಎಂದು ಡಾ.ಎ.ಸುಕುಮಾರನ್ ಸ್ಪಷ್ಟಪಡಿಸಿದ್ದಾರೆ. ರೋಗಕಾರಣದ ಪತ್ತೆ ನಡೆಸಲಾಗುತ್ತಿದೆ ಎಂದವರು ಹೇಳಿದರು.

