ಬದಿಯಡ್ಕ: ಶ್ರೀಲಂಕಾದ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಅವರು ಇಂದು ಬೇಳ ಕುಮಾರಮಂಗಲ ಶ್ರೀಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಲಿದ್ದು, ಪೋಲೀಸ್ ಭದ್ರತೆಯನ್ನು ಬಿಗುಗೊಳಿಸಲಾಗಿದೆ.
ಇಂದು ಬೆಳಿಗ್ಗೆ 7 ಕ್ಕೆ ಶ್ರೀಕ್ಷೇತ್ರಕ್ಕೆ ಆಗಮಿಸಿ ವಿಶೇಷ ಆಶ್ಲೇಷ ಪೂಜೆ ಸಹಿತ ವಿವಿಧ ಪೂಜಾ ಸೇವೆಗಳಲ್ಲಿ ಪಾಲ್ಗೊಳ್ಳುವರು. ಶ್ರೀಲಂಕಾದ ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಐಜಿ ಅಶೋಕ್ ಕುಮಾರ್ ಅವರು ಗುರುವಾರ ಅವಲೋಕಿಸಿದರು. ಡಿಐಜಿ ಸಹಿತ ಉನ್ನತ ಪೋಲೀಸರು ಅವಲೋಕನದಲ್ಲಿ ಪಾಲ್ಗೊಂಡರು. ಭದ್ರತೆಯ ಪೂರ್ಣ ಹೊಣೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ವಹಿಸಲಾಗಿದೆ.
ಶ್ರೀಲಂಕಾ ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಶ್ರೀಕ್ಷೇತ್ರ ಕುಮಾರಮಂಗಲಕ್ಕೆ ಭಕ್ತಾದಿಗಳ ಆಗಮನಕ್ಕೆ ನಿರ್ಬಂಧ ವಿಧಿಸಲಾಗಿದೆ. ಸ್ಥಳೀಯರ ಸಹಿತ ಯಾರಿಗೂ ಶ್ರೀಕ್ಷೇತ್ರ ಪರಿಸರದಲ್ಲಿ ಪ್ರವೇಶಾನುಮತಿಯನ್ನು ನಿಯಂತ್ರಿಸಲಾಗಿದೆ. ಸೀತಾಂಗೋಳಿ, ಬದಿಯಡ್ಕ ಪರಿಸರದ ಎಲ್ಲೆಡೆ ಪೋಲೀಸರ ಬಿಗು ಸರ್ಪಗಾವಲು ಹಾಕಲಾಗಿದೆ.

