ಉಪ್ಪಳ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗರನ್ನು ತೃತೀಯ ದರ್ಜೆಯ ಪ್ರಜೆಗಳಂತೆ ವರ್ತಿಸುವ ಮಲಯಾಳ ಅಧಿಕಾರಿಗಳ ನೀತಿಯನ್ನು ಕೊನೆಗಾಣಿಸಬೇಕೆಂದು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ತಿಳಿಸಿದರು.
ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಕನ್ನಡಾಭಿಮಾನಿಗಳ ಇತ್ತೀಚೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮೂಲಭೂತ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ನಾವು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆಯೆಂದು ತಿಳಿಸಿದರು.
ಪೈವಳಿಕೆ ನಗರ ಸರಕಾರಿ ಹೈಸ್ಕೂಲ್ ಪರಿಸರದಲ್ಲಿ ಜರಗಿದ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿಯ ಪ್ರಾದೇಶಿಕ ಸಮಿತಿಯನ್ನು ರಚಿಸಲಾಯಿತು. ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿದರು. ಕನ್ನಡ ಹೋರಾಟ ಸಮಿತಿಯ ಜೊತೆ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಪಂಚಾಯತಿ ಮಾಜಿ ಸದಸ್ಯ, ನಿವೃತ್ತ ಅಧ್ಯಾಪಕ ಗೋವಿಂದ ಭಟ್, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಕೆ.ಆರ್., ಕನ್ನಡ ಕೈರಳಿ ಸಂಪಾದಕ ಜೋನ್ ಕ್ರಾಸ್ತ, ಶೀನ ಮಾಸ್ತರ್ ಮೊದಲಾದವರು ಮಾತನಾಡಿದರು.
ಪೈವಳಿಕೆ ಪಂಚಾಯತಿ ಕನ್ನಡ ಹೋರಾಟ ಸಮಿತಿಯ ಪ್ರಾದೇಶಿಕ ಸಮಿತಿಯ ಸಂಚಾಲಕರಾಗಿ ಜೋನ್ ಕ್ರಾಸ್ತಾ ಹಾಗೂ ಸಹ ಸಂಚಾಲಕರಾಗಿ ವಿಶ್ವನಾಥ ಏದಾರು, ಮಂಜುನಾಥ ಪೈವಳಿಕೆ, ಪುರಂದರ ಶೆಟ್ಟಿಗಾರ ಚಿಪ್ಪಾರು, ರಾಮ ವೈ.ಬಿ.ಏದಾರು. ಸರಸ್ವತಿ ಪೈವಳಿಕೆ, ರೇಖಾ ಬಾಯಿಕಟ್ಟೆ, ಮುಹಮ್ಮದ್ ಅನೀಷ, ಅಬ್ದುಲ್ ಹಾರಿಸ್ ಬಾಯಾರು, ಶೀನ ಮಾಸ್ತರ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

