ಕಾಸರಗೋಡು: ಬಿರುಸುಗೊಂಡಿರುವ ಮಳೆ ಮತ್ತು ಗಾಳಿಯ ಕಾರಣ ಜಿಲ್ಲೆಯಾದ್ಯಂತ ಇಂದು(ಸೋಮವಾರ) ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ರಜೆ ಘೋಷಿಸಿದ್ದಾರೆ.
ವ್ಯಾಪಕಗೊಂಡಿರುವ ಮಳೆ ಹಾಗೂ ಗಾಳಿಯ ಕಾರಣಗಳಿಂದ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಪ್ರೊಪೆಶನಲ್ ಕಾಲೇಜು ಸಹಿತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕಾಯಿತೆಂದು ಜಿಲ್ಲಾಧಿಕಾರಿಗಳು ತಿಳಿಸಿರುವರು. ಮಳೆ ಸಂಬಂಧಿ ಅವಗಡಗಳ ನಿಯಂತ್ರಣದಲ್ಲಿ ಜಿಲ್ಲಾಡಳಿತ ಈಗಾಗಲೇ ಯಶಸ್ವಿಯಾಗಿದ್ದು, ರೆಡ್ ಅಲರ್ಟ್ ಹಿಂಪಡೆದು ಓರೆಂಜ್ ಅಲರ್ಟ್ ಘೋಶಿಸಿದ್ದರೂ ಭಾನುವಾರ ರಾತ್ರಿಯ ಬಳಿಕ ಮತ್ತೆ ಮಳೆ ತೀವ್ರಗೊಂಡಿದ್ದರ ಪರಿಣಾಮ ಶಿಕ್ಷಣಾಲಯಗಳಿಗೆ ರಜೆ ಘೋಶಿಸಬೇಕಾಯಿತೆಂದು ಜಿಲ್ಲಾಧಿಕಾರಿ ತಿಳಿಸಿರುವರು.
ಹೆತ್ತವರು ಮಕ್ಕಳನ್ನು ತೀವ್ರ ಜಾಗರೂಕತೆಯಿಂದ ನಿಯಂತ್ರಿಸುವ ಹೊಣೆಯ ಬಗ್ಗೆ ಒತ್ತಿ ಹೇಳಿರುವ ಜಿಲ್ಲಾಧಿಕಾರಿಗಳು, ಈಜಲು ತೆರಳುವುದು, ಮನೆಯಿಂದ ಹೊರ ತೆರಳಲು ಅನುಮತಿ ನೀಡುವುದು ಕೂಡದೆಂದು ತಿಳಿಸಿದ್ದಾರೆ. ಸಾರ್ವಜನಿಕರು ಮುತುವರ್ಜಿಯಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮುಂದಾಗಬೇಕಿದ್ದು, ಕುದಿಸಿದ ನೀರು, ಆಹಾರ ಪದಾರ್ಥ ಸೇವಿಸಬೇಕು. ಸೊಳ್ಳೆಗಳಿಂದ ರಕ್ಷಣೆಗೆ ಆದ್ಯತೆ ನೀಡಬೇಕೆಂದೂ ಜಿಲ್ಲಾಧಿಕಾರಿ ಮನವಿ ಮಾಡಿರುವರು.


