ಬದಿಯಡ್ಕ: ನೀರ್ಚಾಲು ಸಮೀಪದ ಬೇಳ ರತ್ನಗಿರಿಯ ಓಂಕಾರ್ ಫ್ರೆಂಡ್ಸ್ ಕ್ಲಬ್ ಮತ್ತು ಓಂಕಾರ್ ಬಾಲಗೋಕುಲ ಸಮಿತಿ ಆಶ್ರಯದಲ್ಲಿ ತೃತೀಯ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವು ಆ.23 ರಂದು ಶುಕ್ರವಾರ ರತ್ನಗಿರಿ ಶ್ರೀಕುದ್ರೆಕ್ಕಾಳಿ ಭಗವತೀ ಕ್ಷೇತ್ರ ವಪರಿಸರದಲ್ಲಿ ಬೆಳಿಗ್ಗೆ 9 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀಕುದ್ರೆಕ್ಕಾಳಿ ಭಗವತೀ ಕ್ಷೇತ್ರದ ಅರ್ಚಕರು ದೀಪ ಬೆಳಗಿಸಿ ಚಾಲನೆ ನೀಡುವರು. ಬಳಿಕ ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 3.30 ರಿಂದ ಸಮಾರೋಪ ಸಮಾರಂಭವು ನೀರ್ಚಾಲು ನಿವೇದಿತಾ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಗಣೇಶ್ ಭಟ್ ಅಳಕ್ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಸರಗೋಡು ತಾಲೂಕು ಕಾರ್ಯವಾಹಕ್ ಪವಿತ್ರನ್ ಕೆ.ಕೆ.ಪುರಂ ಧಾರ್ಮಿಕ ಭಾಷಣ ಮಾಡುವರು. ಕುದ್ರೆಕ್ಕಾಳಿ ಶ್ರೀಭಗವತೀ ಕ್ಷೇತ್ರದ ಅಧ್ಯಕ್ಷ ಜಯರಾಮ ಪೊನ್ನಂಗಳ ಹಾಗೂ ಸಮಾಜ ಸೇವಕ ಶಿವರಾಮ ಮೆಣಸಿನಪಾರೆ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು. ಈ ಸಂದರ್ಭ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.

