ಮುಳ್ಳೇರಿಯ: ಮುಳಿಯಾರಿನ ಅಮ್ಮಂಗೋಡು ಸತ್ಯನಾರಾಯಣಪುರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸನ್ನಿಧಿಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಸಂಘದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜೆಯು ಸಂಪನ್ನವಾಯಿತು.
ದೀಪ ಪ್ರಜ್ವಲನೆ ಮತ್ತು ಭಜನಾ ಸಂಘದ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದರು. ಸವಿತಾ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯಾಂತ್ರಿಕ ಬದುಕಿನಲ್ಲಿ ಈ ರೀತಿಯ ಉಪಾಸನಾ ಸಮಾರಂಭಗಳ ಅನಿವಾರ್ಯತೆಯ ಕುರಿತು ಸವಿವರವಾಗಿ ವಿಸ್ತರಿಸಿ ಮಾತುಗಳನ್ನಾಡಿದರು. ಗೋವಿಂದಬಳ್ಳಮೂಲೆ ಮತ್ತು ವೇದಮೂರ್ತಿ ರವಿ ಭಟ್ ಕಡುಮನೆ ಮುಖ್ಯ ಅತಿಥಿಗಳಾಗಿದ್ದು ಶುಭಾಶಂಸನೆಗೈದರು.
ಮಹಿಳಾ ಸಂಘದ ಕಾರ್ಯದರ್ಶಿ ಜ್ಯೋತಿ ವಿನೋದ ಸ್ವಾಗತಿಸಿ, ರಾಣಿ ಗಣೇಶ್ ವಂದಿಸಿದರು. ತಾರಾ ಪ್ರಕಾಶ್ ನಿರೂಪಣೆಗೈದರು.ವೇದಮೂರ್ತಿ ರವಿ ಭಟ್ ಕಡುಮನೆ ಇವರಿಂದ ಶ್ರೀ ವರಮಹಾಲಕ್ಷ್ಮಿ ಪೂಜಾಧಿ ಕಾರ್ಯಗಳು ಜರಗಿದವು. ಭಜನೆ, ಅರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನದಾನವು ನೆರವೇರಿತು. ಕಾರ್ಯಕ್ರಮದಲ್ಲಿ ಸೇವಾಸಮಿತಿಯ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತ ಮಹಾಜನರು ಭಾಗವಹಿಸಿದರು.


