ಬದಿಯಡ್ಕ: ಸಹಕಾರ ಭಾರತಿಯ ಕಾಸರಗೋಡು ತಾಲೂಕು ಸಮ್ಮೇಳನವು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಇತ್ತೀಚೆಗೆ ನಡೆಯಿತು. ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ಸಮ್ಮೇಳನದ ಅಧ್ಯಕ್ಷರೂ ಆದ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿದರು.
ಸಹಕಾರ ಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಗಣಪತಿ ಕೋಟೆಕಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಹಕಾರ ಭಾರತಿಯ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಕರುಣಾಕರನ್ ನಂಬ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಸ್ತುತ ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಭಾರತಿ ಕಾರ್ಯವೆಸಗುವ ಬಗ್ಗೆ ವಿವರಿಸಿದರು. ಸಹಕಾರ ಭಾರತಿ ರಾಜ್ಯ ಸಮಿತಿ ಸದಸ್ಯರಾದ ಐತಪ್ಪ ಮವ್ವಾರು ಆಡಳಿತ ಮಂಡಳಿ ಮತ್ತು ನೌಕರರು ಸಹಕಾರಿ ಕ್ಷೇತ್ರದಲ್ಲಿ ಎಂಬ ವಿಷಯದ ಕುರಿತು ತರಗತಿ ನಡೆಸಿಕೊಟ್ಟರು. ಸಹಕಾರ ಭಾರತಿ ಎಂಪ್ಲಾಯಿಸ್ ಸೆಲ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೋಡೋತ್ `ನೌಕರರು ಮತ್ತು ಸಂಘಟನೆ' ಎಂಬ ವಿಷಯದ ಕುರಿತು ಮಾತನಾಡಿದರು. ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸುರಾಜ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಸಮ್ಮೇಳನ ಠರಾವಿನ ಮೂಲಕ ಅನುಮೋದಿಸಿತು. ಕೇರಳ ಬ್ಯಾಂಕಿನ ಹೆಸರಿನಲ್ಲಿ ಸಹಕಾರಿ ಕ್ಷೇತ್ರವನ್ನು ದುರ್ಬಲಗೊಳಿಸಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವ ಕೇರಳದ ಎಡರಂಗ ಸರಕಾರದ ಧೋರಣೆಯನ್ನು ಸಮ್ಮೇಳನವು ಖಂಡಿಸಿತು. ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಭಟ್ ಕಿದೂರು ಮಾತನಾಡಿದರು. ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ ಸಂಘಟನಾತ್ಮಕ ವಿಷಯಗಳ ಬಗ್ಗೆ ಮಾತನಾಡಿ ನೂತನ ತಾಲೂಕು ಸಮಿತಿಯ ಘೋಷಣೆ ಮಾಡಿದರು. ಸಹಕಾರ ಭಾರತಿ ಕಾಸರಗೋಡು ತಾಲೂಕು ಅಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ, ಉಪಾಧ್ಯಕ್ಷರಾಗಿ ಶಂಕರ್ ನಾಯ್ಕ್ ಕಾಸರಗೋಡು, ಪ್ರಧಾನ ಕಾರ್ಯದರ್ಶಿಯಾಗಿ ಗಣಪತಿ ಪ್ರಸಾದ್ ನೀರ್ಚಾಲು, ಕಾರ್ಯದರ್ಶಿಯಾಗಿ ರಮೇಶ್ ವಿವೇಕಾನಂದನಗರ, ಖಜಾಂಜಿಯಾಗಿ ಹರಿಪ್ರಸಾದ್ ಮಧೂರು, ಸದಸ್ಯರುಗಳಾಗಿ ಅಂಬಾಡಿ ಕೆ.ಆರ್. ಕಲ್ನಾಡು, ಕೃಷ್ಣಪ್ರಸಾದ್ ಕಲ್ನಾಡು, ಜಯಂತಿ ಕುಂಟಿಕಾನ, ಆಶೀರ್ವಾದ ಬೆಳ್ಳೂರು, ಉದನೇಶವೀರ ನೀರ್ಚಾಲು, ಕೃಷ್ಣಮೂರ್ತಿ ಕುಂಬಡಾಜೆ, ರಮೇಶ್ ಚೆಮ್ನಾಡು, ರವಿಕಾಂತ ಕೇಸರಿ ಕಡಾರು, ಚರಣ್ ಕುಮಾರ್ ಬಂದಡ್ಕ, ಶಾರದಾ ಎಸ್.ಎನ್.ಭಟ್ ಮಧೂರು ಆಯ್ಕೆಯಾದರು. ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರುಗಳು, ನಿರ್ದೇಶಕರುಗಳು, ನೌಕರ ವೃಂದದವರು ಹಾಗೂ ಸಹಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು. ತಾಲೂಕು ಅಧ್ಯಕ್ಷ ಪದ್ಮರಾಜ್ ಪಟ್ಟಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


