ಪೆರ್ಲ: 25 ನೇ ವರ್ಷದ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಅಕ್ಷತಾರಾಜ್ ಪೆರ್ಲ ಅವರ 'ಬೊಳ್ಳಿ' ತುಳು ಕಾದಂಬರಿ ಆಯ್ಕೆಯಾಗಿದ್ದು ಹವ್ಯಕ ಸಮಾಜದ ಮೊದಲ ಕಿರಿಯ ತುಳು ಕಾದಂಬರಿಗಾರ್ತಿಯಾಗಿ ತುಳು ಕಾದಂಬರಿ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.
ಮಂಗಳೂರು ಆಕಾಶವಾಣಿಯಲ್ಲಿ ಕನ್ನಡ ಮತ್ತು ತುಳು ವಿಭಾಗಗಳಲ್ಲಿ ಕಾರ್ಯಕ್ರಮ ನಿರ್ಮಾಣ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಷತಾ ರಾಜ್ ರ 'ಕಾಸಿನ ಸರ' ಎಂಬ ಹವ್ಯಕ ಕತೆಗೆ ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಲಭಿಸಿತ್ತು. 'ಸಂಚಿಯೊಳಗಿನ ಸಂಜೆಗಳು' ಕನ್ನಡ ಪುಸ್ತಕ ಪ್ರಾಧಿಕಾರದ ಹಸ್ತಪ್ರತಿ ಪುರಸ್ಕೃತ ಕವನ ಸಂಕಲನ. ಹವಿಗನ್ನಡ, ಕನ್ನಡ, ತುಳು ಈ ಮೂರು ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದು ಕವಯಿತ್ರಿಯಾಗಿ, ಕತೆಗಾರ್ತಿಯಾಗಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವರು.
ತುಳುನಾಡಿನ ಸಾಂಪ್ರದಾಯಿಕ ಆರಾಧನೆ ದೈವಾರಾಧನೆ 'ಬೊಳ್ಳಿ' ಕಾದಂಬರಿಯ ಕಥಾವಸ್ತುವಾಗಿದ್ದು ಅವಳಿ ವೀರರರಾದ ಕೋಟಿ ಚೆನ್ನಯರ ತತ್ವ ಸಿದ್ಧಾಂತಗಳಿಂದ ಪ್ರೇರಿತನಾಗಿ ಬೊಳ್ಳಿಯೆಂಬ ಬಡ ಹುಡುಗನೊಬ್ಬ ವರ್ಣಬೇಧದ ವಿರುದ್ಧ ಎತ್ತಿದ ಬಂಡಾಯದ ಧ್ವನಿ ಕತೆಯ ಜೀವಾಳವಾಗಿದೆ. ತುಳು ಕಾದಂಬರಿ ಕ್ಷೇತ್ರದ ಮೊದಲ ಪ್ರಯತ್ನದಲ್ಲೇ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಬಾಚಿಕೊಂಡಿರುವ ಇವರು ಹವಿಗನ್ನಡ, ಕನ್ನಡ ಅಷ್ಟೇ ಅಲ್ಲದೆ ತುಳು ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಹೊಸ ಸಂಚಲನ ಮೂಡಿಸಿದೆ. ಮೂಡಬಿದಿರೆ ವೆಂಕಟೇಶ ಭಾಗ್ವತ್ ಮತ್ತು ರಾಜೇಶ್ವರಿ ದಂಪತಿಯ ಪುತ್ರಿಯಾಗಿದ್ದು ಕಾಸರಗೋಡು ಎಣ್ಮಕಜೆ ಕಯ್ಯಂಕೂಡ್ಲು ಗಣರಾಜ್ ಭಟ್ ಪತ್ನಿಯಾದ ಇವರ 'ಅಬ್ಬೆ ಮನೆ' ಎಂಬ ಹವ್ಯಕ ಕಾದಂಬರಿ ಮತ್ತು 'ಕಾಗೆ ಮುಟ್ಟಿನ ಅಕ್ಕಣಿ' ನೀಳ್ಗತೆ ಪ್ರಕಟಣೆಯ ಹಾದಿಯಲ್ಲಿದೆ. ಸೆಪ್ಟೆಂಬರ್ 15ರಂದು ಉಡುಪಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿರುವರು.


