HEALTH TIPS

ಗರಿಗೆದರಿದ ಉಪ ಚುನಾವಣಾ ಕಣ- ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳು ಯಾರು?

   
      ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಅಧಿಕಾರಿ ಘೋಷಿಸುವದರೊಂದಿಗೆ ಗಡಿನಾಡ ತಾಲೂಕಲ್ಲಿ ರಾಜಕೀಯ ವಲಯ ಸಕ್ರಿಯವಾಗಿದೆ. ಅ.21 ರಂದು ಉಪಚುನಾವಣೆ ನಡೆಯಲಿದೆ. ಐಕ್ಯರಂಗ, ಎಡರಂಗ ಮತ್ತು ಬಿಜೆಪಿ ಚುನಾವಣೆಯ ಅಖಾಡಕ್ಕೆ ಧುಮುಕಿವೆ. ಕಳೆದ 2016ರ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೇವಲ 89 ಮತಗಳಿಂದ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ಕುತೂಹಲಕಾರಿಯಾಗಿ ಗೆದ್ದಿದ್ದರು. ಪ್ರಬಲ ಪ್ರತಿಸ್ಫರ್ಧೆ ನೀಡಿ ವಿಜಯದ ಬಾಗಿಲ ತನಕ ತಲಪಿ ಸೋತಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರು ರಾಜ್ಯ ಉತ್ಛನ್ಯಾಯಾಲಯದಲ್ಲಿ ನಕಲಿ ಮತ ಚಲಾವಣೆಯಾಗಿರುವುದಾಗಿ ಚುನಾವಣ ತಕರಾರು ಅರ್ಜಿ ಸಲ್ಲಿಸಿದ್ದರು. ಶಾಸಕರ ನಿಧನದ ಬಳಿಕ ಬಿಜೆಪಿ ಪರಾಜಿತ ಅಭ್ಯರ್ಥಿಯವರು ದೂರನ್ನು ಹಿಂಪಡೆದ ಕಾರಣ ಇದೀಗ ಮರು ಚುನಾವಣೆ ಘೋಷಣೆಯಾಗಿದೆ.
       ಐಕ್ಯರಂಗದಿಂದ ಮಾಜಿ ಸಚಿವ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಎಂ.ಸಿ. ಕಮರುದೀನ್, ಜಿಲ್ಲಾ ಕಾರ್ಯದರ್ಶಿ ಮುನೀರ್ ಹಾಜಿ, ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎ.ಕೆ.ಎಂ. ಅಶ್ರಫ್ ಎಂಬ ಹೆಸರುಗಳು ಕೇಳಿಬರುತ್ತಿದೆ. ಎಡರಂಗದಿಂದ ಸಿಪಿಎಂ ನಾಯಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಪಿ. ಸತೀಶ್ಚಂದ್ರನ್, ಸಿಪಿಎಂ ಸೆಕ್ರೆಟರಿಯೇಟ್ ಸದಸ್ಯರಾದ ಕೆ.ಆರ್. ಜಯಾನಂದ ಮತ್ತು ಎಂ. ಶಂಕರ ರೈ ಎಂಬ ಹೆಸರುಗಳು ಕೇಳಿಬರುತ್ತಿದೆ. ಜೊತೆಗೆ ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞÂಂಬು ಹಾಗೂ ಇದರ ಜೊತೆಗೆ ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರ ಹೆಸರು ಹೊಸತಾಗಿ ಕೇಳಿಬರುತ್ತಿದೆ.
       ಬಿಜೆಪಿಯಿಂದ ಪಕ್ಷದ ರಾಜ್ಯ ಸಮಿತಿ ಸದಸ್ಯ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುಂಟಾರು ರವೀಶ ತಂತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮತ್ತು ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಎಂಬ ಕನ್ನಡಿಗ ಅಭ್ಯರ್ಥಿಗಳ ಹೆಸರು ಅಂತಿಮ ಪಟ್ಟಿಯಲ್ಲಿದೆ. ಮೂರೂ ಪಕ್ಷಗಳ ಅಧಿಕೃತವಾಗಿ ಅಭ್ಯರ್ಥಿಗಳ ಆಯ್ಕೆ ಇನ್ನೂ ಆಗಿಲ್ಲ. ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಎಡರಂಗದ ಜಿಲ್ಲಾ ಕಾರ್ಯಕಾರಿಣಿ ಸಭೆ ಸೋಮವಾರ ನಡೆದಿದ್ದು, ಅಂತಿಮಗೊಳಿಸಿದ ಹೆಸರುಗಳ ಪಂಟಿಯನ್ನು ರಾಜ್ಯ ಸಮಿತಿಗೆ ಕಳಿಸಿಕೊಡಲಾಗಿದೆ.
     ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದು ಬೀಗುತ್ತಿರುವ ಐಕ್ಯರಂಗ ಹಿಂದಿನ ಫಲಿತಾಂಶದಂತೆ ಈ ವಿಧಾನ ಸಭಾ ಚುನಾವಣೆಯ ಫಲಿತಾಂಶವೆಂಬ ನಿರೀಕ್ಷೆಯಲ್ಲಿದ್ದರೆ, ಕೇಂದ್ರ ಸರ್ಕಾರದ ಜನಪರ ಆಡಳಿತದಿಂದ ಮತದಾರರು ಬಿಜೆಪಿ ಪರ ಮತನೀಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ವರ್ಗದ ಮತ ಕ್ರೋಢಿಕರಣವಾದಂತೆ ಈ ಚುನಾವಣೆಯಲ್ಲಿ ಇನ್ನೊಂದು ವರ್ಗದ ಮತ ಪಕ್ಷದತ್ತ ಹರಿಯಲಿರುವುದೆಂಬ ದೃಢ ವಿಶ್ವಾಸ ಬಿಜೆಪಿಯದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋರಿಕೆಯಾದ ಪಕ್ಷದ ಮತಗಳು ಮತ್ತೆ ದೊರಕುವ ಬಲವಾದ ವಿಶ್ವಾಸ ಎಡರಂಗಕ್ಕಿದೆ.
      ಮೂರು ಪಕ್ಷಗಳಲ್ಲೂ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದ್ದು ಕೊನೆಯ ಕ್ಷಣದಲ್ಲಿ ಅನಿರೀಕ್ಷಿತ ಬದಲಾವಣೆಯಗುವ ಸಾಧ್ಯತೆಯೂ ಇಲ್ಲದಿಲ್ಲ. ಅ. 21ರಂದಿನ ಮಂಜೇಶ್ವರ ಮಂಡಲ ಉಪ ಚುನಾವಣೆಯಲ್ಲಿ ಜಿದ್ದಾ ಜಿದ್ದಿನ ತ್ರಿಕೋನ ಸ್ಫರ್ಧೆಯ ಬಳಿಕ ಅ. 24ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
           ಸಂಭಾವ್ಯ ಅಭ್ಯರ್ಥಿಗಳು:
    ಈ ತನಕ ಅಳೆದು ತೂಗಿದರೂ ಮೂರು ಪಕ್ಷಗಳಿಗೂ ಅಧಿಕೃತ ಅಭ್ಯರ್ಥಿಗಳನ್ನು ಚುನಾವಣೆ ಘೋಷಣೆಯ ತನಕ ಕ್ಷೇತ್ರಕ್ಕೆ ಇಳಿಸಲಾಗಲಿಲ್ಲ. ಆದರೆ ಎಲ್ಲ ಪಕ್ಷಗಳೂ ಜಿಲ್ಲೆಯ ಒಳಗಿನ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿವೆ. ಅದರಲ್ಲೂ ಬಿಜೆಪಿ ಮತ್ತು ಎಡರಂಗ ಕನ್ನಡಿಗ ಅಭ್ಯರ್ಥಿಗಳಿಗೆ ಮಣೆ ಹಾಕುವ ಮಾತು ಕೇಳಿ ಬರುತ್ತಿದೆ.
        ಎಲ್ಲರಲ್ಲೂ ಗೆಲುವಿನ ವಿಶ್ವಾಸ:
    ಇದು ಐಕ್ಯರಂಗ ಮತ್ತು ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆಯ ಕಣವಾಗಿದೆ. ಕೇವಲ 89 ಮತದಿಂದ ಗೆದ್ದ ಕ್ಷೇತ್ರವನ್ನು ಮತ್ತೆ ಗೆಲ್ಲಲೇಬೇಕು ಎಂದು ಯುಡಿಎಫ್ ಇಚ್ಚಿಸಿದರೆ, ಕೂದಳೆಳೆಯ ಅಂತರದಲ್ಲಿ ಸೋಲುಂಡ ಬಿಜೆಪಿ ಮತ್ತೆ ಮ್ಯಾಜಿಕ್ ನಂಬ್ರದ ಗಡಿ ದಾಟಲು ಹುರುಪುಗೊಳ್ಳುತ್ತಿದೆ.
    ಹೊಸ ಅಭ್ಯರ್ಥಿಗಳ ಬಗ್ಗೆ ಒಲುವು:
   ಎಡರಂಗದ ಶಕ್ತಿ ಕೇಂದ್ರಗಳೆಂದೇ ಕರೆಯಲ್ಪಡುವ ಪೈವಳಿಕೆ. ವರ್ಕಾಡಿ ವ್ಯಾಪ್ತಿಗಳಲ್ಲಿ ಪಕ್ಷದ ಯುವ ಕಾರ್ಯಕರ್ತರು ಕನ್ನಡಿಗರಾದ ಯುವ ಅಭ್ಯರ್ಥಿಗಳ ಆಯ್ಕೆಗೆ ಉತ್ಸುಕರಾಗಿರುವುದು ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಈವರೆಗೆ ರಾಜಕೀಯವಾಗಿ ಎಲ್ಲೂ ಕಾಣಿಸಿಕೊಳ್ಳದ, ಎಲ್ಲಾ ಪಕ್ಷದವರೊಂದಿಗೂ ನಿಕಟ ಒಡನಾಟವಿರುವ ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗನಟ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರ ಹೆಸರು ಕೇಳಿಬರುತ್ತಿರುವುದು ಸಂಚಲನ ಸೃಷ್ಟಿಸಿದೆ. 
    ಕಳೆದ ಎ. 23ಕ್ಕೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದಿರುವ ವಿಶ್ವಾಸ ಐಕ್ಯರಂಗದ್ದು. ಲೋಕಸಭಾ ಚುನಾವಣೆಯಲ್ಲಿ ಒಂದು ವಿಭಾಗದ ಮತ ಕ್ರೋಡೀಕರಣವಾದಂತೆ ಈ ಚುನಾವಣೆಯಲ್ಲಿ ಆಗಲು ಸಾಧ್ಯವಿಲ್ಲ. ಉಭಯ ರಂಗಗಳಿಂದ ಧಾರಾಳ ಮತಗಳು ದೊರಕಿ ಗೆಲ್ಲುವ ವಿಶ್ವಾಸ ಬಿಜೆಪಿ ಪಕ್ಷದ್ದು. ರಾಜ್ಯವನ್ನಾಳುವ ಎಡರಂಗ ಸರ್ಕಾರದ ಜನಪರ ಯೋಜನೆಗೆ ಮತದಾರರು ತಲೆಬಾಗಿ ಎಡರಂಗವನ್ನು ಗೆಲ್ಲಿಸಿಯಾರೆಂಬ ವಿಶ್ವಾಸ ಎಡರಂಗದ್ದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries