ಕಾಸರಗೋಡು: ಶಾಸಕರ ನಿಧನದಿಂದ ತೆರವಾಗಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಅ.21 ರಂದು ನಡೆಸಲು ದಿನನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ.
ಎಲ್‍ಡಿಎಫ್ ಅಭ್ಯರ್ಥಿಯಾಗಿ ಕನ್ನಡಿಗಾರದ ಶಂಕರ ರೈ ಮಾಸ್ತರ್ ಹಾಗೂ ಯುಡಿಎಫ್ ಅಭ್ಯರ್ಥಿಯಾಗಿ ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯದರ್ಶಿ ಎಂ.ಸಿ.ಖಮರುದ್ದೀನ್ ಕಣಕ್ಕಿಳಿಯುವುದಾಗಿ ಪಕ್ಷಗಳು ಈಗಾಗಲೇ ಘೋಶಿಸಿವೆ. ಆದರೆ ಬಿಜೆಪಿ ಅಭ್ಯರ್ಥಿಯ ಘೋಷಣೆ ಇನ್ನೂ ಆಗಿಲ್ಲ.
ಕೊಚ್ಚಿಯಲ್ಲಿ ಗುರುವಾರ ನಡೆದ ಪಕ್ಷದ ಉನ್ನತಮಟ್ಟದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯೊಂದನ್ನು ಕೇಂದ್ರ ಘಟಕಕ್ಕೆ ಕಳಿಸಲಾಗಿದ್ದು, ಶುಕ್ರವಾರ ಘೋಷಣೆಯಾಗುವ ಸಾಧ್ಯತೆ ಇದೆಯೆಂದು ತಿಳಿಯಲಾಗಿತ್ತು. ಆದರೆ ಶುಕ್ರವಾರವೂ ಅಭ್ಯರ್ಥಿಯ ಘೋಷಣೆಯಾಗದಿರುವುದರಿಂದ ನಾಳೆ (ಶನಿವಾರ) ಘೋಷಣೆಯಾಗುವ ಸಾಧ್ಯತೆಯಿದೆಯೆಂದು ತಿಳಿಯಲಾಗಿದೆ.
ಶುಕ್ರವಾರ ಯಾರೂ ನಾಮಪತ್ರ ಸಲ್ಲಿಸಿಲ್ಲ:
ವಿಧಾನ ಸಭಾ ಉಪಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸೆ.30 ರಂದು ಕೊನೆಯ ದಿನವಾಗಿದ್ದು, ಈವರೆಗೆ ಸ್ವತಂತ್ರ ಅಭ್ಯರ್ಥಿಗಳಾಗಿರುವ ಇಬ್ಬರಷ್ಟೇ ನಾಮಪತ್ರ ಸಲ್ಲಿಸಿದ್ದಾರೆ. ತಮಿಳುನಾಡು ಸೇಲಂ ನಿವಾಸಿಯಾಗಿರುವ ಡಾ.ಕೆ.ಪದ್ಮರಜನ್ ಮತ್ತು ಕುಂಬಳೆ ನಾರಾಯಣಮಂಗಲದ ಕೆ.ಅಬ್ದುಲ್ಲ ಎಂಬ ಸ್ವತಂತ್ರ ಅಭ್ಯರ್ಥಿಗಳಷ್ಟೆ ನಾಮಪತ್ರ ಸಲ್ಲಿಸಿದ್ದು, ಯುಡಿಎಫ್ ಹಾಗೂ ಎಲ್‍ಡಿಎಫ್ ಅಭ್ಯರ್ಥಿಗಳು ಇಂದು ಅಥವಾ ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


