ಹಿಂದು ಪಂಚಾಂಗದಲ್ಲಿನ ಹನ್ನೆರಡು ಮಾಸಗಳಲ್ಲಿ ಧನುರ್ವಸಕ್ಕೆ ಬಹಳ ಮಹತ್ವವಿದೆ. ಧನುರ್ವಸವನ್ನು ಮಾರ್ಗಶೀರ್ಷ ಮಾಸವೆಂದೂ ಕರೆಯುತ್ತಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ 'ಮಾಸಾನಾಂ ಮಾರ್ಗಶೀರ್ಷೋಹಂ' ('ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು') ಎಂದು ತಿಳಿಸಿದ್ದಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಒಂದು ತಿಂಗಳು ಬೇಕು. ಅಂತೆಯೇ ಸೂರ್ಯನು ವೃಶ್ಚಿಕರಾಶಿಯಿಂದ ಧನುರಾಶಿಗೆ ಪ್ರವೇಶಿಸಿ ಅಲ್ಲಿ ಒಂದು ತಿಂಗಳ ಕಾಲ ಇರುವ ಅವಧಿಯನ್ನು 'ಧನುರ್ಮಾಸ' ಎಂದು ಕರೆಯಲಾಗುತ್ತದೆ. ಈ ಬಾರಿ ಇಂದಿನಿಂದ (ಬುಧವಾರ) ಪ್ರಾರಂಭವಾಗುವ ಧನುರ್ಮಾಸವು 2021ರ ಜನವರಿ 14ರಂದು ಮುಕ್ತಾಯಗೊಳ್ಳುತ್ತದೆ.
ಹಿಂದುಪಂಚಾಂಗದ ಪ್ರಕಾರ ಒಂದು ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯಣ ಹಗಲಾದರೆ ದಕ್ಷಿಣಾಯನ ರಾತ್ರಿ. ಮಾರ್ಗಶೀರ್ಷ ಮಾಸವು (ಧನುರ್ಮಾಸ) ದಕ್ಷಿಣಾಯನದಲ್ಲಿ ಬರುತ್ತದೆ. ಈ ಮಾಸವು ರಾತ್ರಿ ಮುಗಿದು ಹಗಲು ಆರಂಭವಾಗುವ ಶ್ರೇಷ್ಠವಾದ ಬ್ರಾಹ್ಮೀಮುಹೂರ್ತದ ಸಮಯ. ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲ ಎನ್ನಲಾಗುತ್ತದೆ. ಹಾಗಾಗಿ ಈ ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೆನಿಸಿದೆ. ಮಹಾವಿಷ್ಣುವಿನ ಜತೆ ಮಹಾಲಕ್ಷಿಮಯನ್ನೂ ಪೂಜಿಸುವುದರಿಂದ ಸಂಪತ್ತು ಒಲಿಯುವುದೆಂದು ಹೇಳಲಾಗುತ್ತದೆ.
ಅಗ್ನಿಪುರಾಣ, ಪಾಂಚರಾತ್ರಾಗಮ, ಸ್ಮೃತಿಮುಕ್ತಾವಳಿ ಮುಂತಾದವುಗಳಲ್ಲಿ ಧನುರ್ವಸದ ಮಹಾತ್ಮೆಯನ್ನು ಹೇಳಲಾಗಿದೆ. ಪಾಂಚರಾತ್ರಾಗಮದಲ್ಲಿ ಧನುರ್ವಸದ ಮಹಾತ್ಮೆಯನ್ನು ನಾಲ್ಕು ಅಧ್ಯಾಯಗಳಲ್ಲಿ ಹೇಳಲಾಗಿದೆ. ಈ ಮಾಸದಲ್ಲಿ ಬ್ರಾಹ್ಮೀಮುಹೂರ್ತದಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ಇನ್ನೂ ನಕ್ಷತ್ರಗಳು ಇರುವಾಗಲೇ ದೇಗುಲಗಳಲ್ಲಿ ಬೆಳಗಿನ ಪೂಜೆ ಪ್ರಾರಂಭವಾಗಿ, ಸೂರ್ಯೋದಯಕ್ಕಿಂತ ಮೊದಲೇ ಮುಕ್ತಾಯವಾಗುತ್ತದೆ. ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ಈ ಮಾಸವು ಅಶುಭಕರವೆಂಬ ನಂಬಿಕೆಯಿಂದ ಮದುವೆ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. ಬದಲಾಗಿ ಈ ಮಾಸವಿಡೀ ಮಹಾವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. ಧನುರ್ಮಾಸದಲ್ಲಿ ವಿಶೇಷವಾಗಿ ಬೆಳಗ್ಗೆ ವಿಷ್ಣು ಸಹಸ್ರನಾಮ, ಪುರುಷಸೂಕ್ತ, ವಿಷ್ಣುಸೂಕ್ತ, ನಾರಾಯಣೋಪನಿಷತ್ತನ್ನು ಪಠಿಸಲಾಗುತ್ತದೆ.
ಧನುರ್ಮಾಸದಲ್ಲಿ ಯಾರು ಬ್ರಾಹ್ಮೀಮುಹೂರ್ತದಲ್ಲೇ ಎದ್ದು ಸ್ನಾನ ಮಾಡಿ ಮಹಾವಿಷ್ಣುವನ್ನು ಪೂಜಿಸಿ, ವಿಶೇಷವಾಗಿ ಮುದ್ಗಾನ್ನದ (ಹುಗ್ಗಿ) ನೈವೇದ್ಯ ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ ಎನ್ನುತ್ತಾರೆ. ಇದರಿಂದ ಶತ್ರುಗಳು ನಶಿಸುವರು, ದೀರ್ಘಾಯುಸ್ಸು ಲಭಿಸುವುದು. ಸ್ವರ್ಗಭ್ರಷ್ಟನಾದ ಇಂದ್ರನ ಪರವಾಗಿ ಶಚೀದೇವಿಯು ಲಕ್ಷ್ಮಿಯನ್ನು ಪೂಜಿಸಿ ಮುದ್ಗಾನ್ನದ ನೈವೇದ್ಯ ಮಾಡಿ ಸ್ತುತಿಸಿದ್ದರಿಂದ ಇಂದ್ರನು ಮರಳಿ ಸ್ವರ್ಗಾಧಿಪತ್ಯ ಪಡೆದನೆಂಬ ಕಥೆಯೂ ಇದೆ. ಪಾಂಡವರು ವನವಾಸದಲ್ಲಿರುವಾಗ ನಾರದರು, 'ಧನುರ್ಮಾಸದಲ್ಲಿ ಪ್ರತಿನಿತ್ಯ ಬ್ರಾಹ್ಮೀಮುಹೂರ್ತದಲ್ಲಿ ಮಹಾವಿಷ್ಣುವಿಗೆ ಹುಗ್ಗಿಯನ್ನು ಸಮರ್ಪಿಸಿ, ಪೂಜಿಸಿದರೆ ಯುದ್ಧದಲ್ಲಿ ಜಯ ಗಳಿಸುವಿರಿ' ಎಂದು ತಿಳಿಸಿದ್ದರು. ಅದರಂತೆ ಪಾಂಡವರು ಧನುರ್ಮಾಸದ ಪೂಜೆ ಮಾಡಿ ಕುರುಕ್ಷೇತ್ರ ಯುದ್ಧದಲ್ಲಿ ಜಯ ಸಾಧಿಸಿದರೆಂದು ಹೇಳಲಾಗುತ್ತದೆ.
ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಚಳಿಗಾಲದಲ್ಲಿ ದೇಹ ಎಣ್ಣೆ ಅಂಶ ಕಳೆದುಕೊಳ್ಳುವುದರಿಂದ ಮುದ್ಗಾನ್ನದಲ್ಲಿ ಬಳಸುವ ತುಪ್ಪವು ದೇಹಕ್ಕೆ ಎಣ್ಣೆ ಅಂಶವನ್ನು ಒದಗಿಸುವುದು. ಅಲ್ಲದೆ ಒಣ ಹವೆಯಿಂದ ಚರ್ಮವು ಒಡೆದು ಹೊಸ ಚರ್ಮವು ರೂಪುಗೊಳ್ಳುವುದರಿಂದ ಚರ್ಮವನ್ನು ಪೆÇೀಷಿಸುವ ಆಹಾರ ಆವಶ್ಯಕ. ಈ ಕಾಲದಲ್ಲಿ ದೇಹದಲ್ಲಿ ಕೊಬ್ಬಿನಂಶವು ಕಡಿಮೆಯಾಗುವುದರಿಂದ ಹುಗ್ಗಿಯನ್ನು ಸೇವಿಸಬೇಕೆಂದು ಹೇಳುತ್ತಾರೆ. ಇದರಿಂದ ಶರೀರದ ಸಮತೋಲನವನ್ನು ಕಾಪಾಡಬಹುದು. ಒಟ್ಟಾರೆ ಧನುರ್ಮಾಸದ ಆಚರಣೆಯಲ್ಲಿ ಆಧ್ಯಾತ್ಮಿಕ, ವೈಜ್ಞಾನಿಕ, ಭಾವನಾತ್ಮಕ ಅಂಶಗಳೆಲ್ಲ ಸೇರಿವೆ. ದೇವರನ್ನು ಧ್ಯಾನಿಸಲು, ಪೂಜಿಸಲು ಇದು ಶ್ರೇಷ್ಠ ಮಾಸವಾಗಿದೆ.



