ನವದೆಹಲಿ: ಜಾಗತಿಕವಾಗಿ ಅತ್ಯಂತ ಹೆಚ್ಚಿನ ಕಲುಷಿತ ರಾಜಧಾನಿಗಳ ಪೈಕಿ ನವದೆಹಲಿ ಅಗ್ರ ಸ್ಥಾನದೊಂದಿಗೆ ವಿಶ್ವದ 30 ಹೆಚ್ಚಿನ ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ.
ಸ್ವಿಸ್ ಸಂಸ್ಥೆ ಐಕ್ಯೂಏರ್ ಸಿದ್ಧಪಡಿಸಿರುವ ವಿಶ್ವ ವಾಯು ಗುಣಮಟ್ಟ ವರದಿ 2020 ಜಾಗತಿಕವಾಗಿ ಬಿಡುಗಡೆಯಾಗಿದೆ. ಆದಾಗ್ಯೂ, 2019ರಿಂದ 2020ರವರೆಗೂ ದೆಹಲಿಯ ವಾಯು ಗುಣಮಟ್ಟದಲ್ಲಿ ಸುಮಾರು ಶೇ. 15 ರಷ್ಚು ಸುಧಾರಣೆಯಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಈ ಪ್ರಗತಿಯ ಹೊರತಾಗಿಯೂ, ವಿಶ್ವದಲ್ಲಿ ಮಾಲಿನ್ಯಗೊಂಡ ರಾಜಧಾನಿಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿದ್ದು, ಮಾಲಿನ್ಯಗೊಂಡ ನಗರಗಳ ಪೈಕಿ 10ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಮಾಲಿನ್ಯಗೊಂಡ ನಗರಗಳ ಪೈಕಿ 22 ನಗರಗಳು ಭಾರತದಲ್ಲಿರುವುದಾಗಿ ವರದಿ ತಿಳಿಸಿದೆ. ದೆಹಲಿ ಹೊರತುಪಡಿಸಿದಂತೆ ಇತರ 21 ನಗರಗಳು ವಿಶ್ವದ 30 ಹೆಚ್ಚಿನ ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಗಾಜಿಯಾಬಾದ್, ಬುಲಂದ್ ಷಹರ್, ಬಿಸ್ರಾಕ್ ಜಲಾಲ್ ಪುರ, ನೊಯ್ಡಾ, ಗ್ರೇಟರ್ ನೊಯ್ಡಾ, ಕಾನ್ಫುರ, ಲಖನೌ, ಮೀರತ್, ಅಗ್ರಾ, ಉತ್ತರ ಪ್ರದೇಶದ ಮುಜಾಫರ್ ನಗರ, ರಾಜಸ್ಥಾನದ ಬಿವಾನಿ ಫಾರಿದಾಬಾದ್, ಜಿಂದ್, ಹಿಸಾರ್, ಫತ್ತೆಹಾಬಾದ್, ಬಂದ್ವಾರಿ, ಗುರುಗ್ರಾಮ, ಯಮುನಾ ನಗರ, ರೊಹ್ಟಕ್, ಮತ್ತು ಹರಿಯಾದ ಧರುಹೇರಾ, ಬಿಹಾರದ ಮುಜಾಫರ್ ಪುರ್ ನಗರ ಹೆಚ್ಚಿನ ಕಲುಷಿತ ನಗರಗಳಾಗಿವೆ.
ಗಾಜಿಯಾಬಾದ್ ವಿಶ್ವದಲ್ಲಿಯೇ ಎರಡನೇ ಹೆಚ್ಚಿನ ಕಲುಷಿತ ನಗರವಾಗಿದ್ದು, ಬುಲಂದ್ ಷಹರ್, ಬಿಸ್ರಾಕ್ ಜಲಾಲ್ ಪುರ್, ನೊಯ್ಡಾ, ಗ್ರೇಟರ್ ನೊಯ್ಡಾ, ಕಾನ್ಫುರ, ಲಖನೌ ಮತ್ತು ಬಿವಾಯ್ ನಂತರದ ಸ್ಥಾನದಲ್ಲಿವೆ. 106 ರಾಷ್ಟ್ರಗಳಿಂದ ಪಿಎಂ 2.5 ಡಟಾ ಆಧಾರದ ಮೇಲೆ ಜಾಗತಿಕವಾಗಿ ನಗರಗಳ ಶ್ರೇಯಾಂಕ ವರದಿ ತಯಾರಿಸಲಾಗಿದೆ. ಸಾರಿಗೆ, ಅಡುಗೆಗಾಗಿ ಸುಡುವುದಿ, ವಿದ್ಯುತ್ ಛಕ್ತಿ ಉತ್ಪಾದನೆ, ಉದ್ಯಮ, ಕಟ್ಟಡ. ತ್ಯಾಜ್ಯ ಸುಡುವುದು ಮತ್ತಿತರ ಕಾರಣಗಳಿಂದ ದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಸಾರಿಗೆ ಕ್ಷೇತ್ರ ಪ್ರಮುಖ ಕೊಡುಗೆ ನೀಡುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಲಾಕ್ ಡೌನ್ ಕಾರಣದಿಂದಾಗಿ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಯಾಗಿರುವುದಾಗಿ ಗ್ರೀನ್ ಪೀಸ್ ಇಂಡಿಯಾದ ಹವಾಮಾನ ಆಂದೋಲನಕಾರ ಅವಿನಾಶ್ ಚಂಚಲ್ ಹೇಳಿದ್ದಾರೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ವರದಿ ಪ್ರಾಮುಖ್ಯತೆ ನೀಡಿರುವುಗಾಗಿ ಐಕ್ಯೂಏರ್ ಸಿಇಒ ಫ್ರಾಂಕ್ ಹಮ್ಮೀಸ್ ಹೇಳಿದ್ದಾರೆ.



