ನವದೆಹಲಿ: ಅತ್ಯಾಚಾರ ಸಂತ್ರಸ್ತೆಯರು, ಲೈಂಗಿಕ ಕಿರುಕುಳಕ್ಕೆ ಒಳಗಾದ ಅಪ್ರಾಪ್ತೆಯರು, ದಿವ್ಯಾಂಗರು ಸೇರಿದಂತೆ ವಿಶೇಷ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಅವಧಿ ಮಿತಿಯನ್ನು ಪ್ರಸ್ತುತವಿರುವ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವ ಮಸೂದೆ ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡಿದೆ.
ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020ನ್ನು ಧ್ವನಿ ಮತದಿಂದ ಸದನ ಅಂಗೀಕರಿಸಿತು. ಲೋಕಸಭೆಯಲ್ಲಿ ವರ್ಷದ ಹಿಂದೆಯೇ ಈ ಮಸೂದೆ ಅಂಗೀಕಾರಗೊಂಡಿತ್ತು.
ಸದಸ್ಯರು ಪ್ರಸ್ತಾಪಿಸಿದ ಇತರ ಕೆಲವು ತಿದ್ದುಪಡಿಗಳೊಂದಿಗೆ ರಾಜ್ಯಸಭೆಯ ಸೆಲೆಕ್ಟ್ ಕಮಿಟಿಗೆ ಮಸೂದೆಯನ್ನು ಕಳುಹಿಸಬೇಕೆಂಬ ಬೇಡಿಕೆಗೆ ಧ್ವನಿಮತದಲ್ಲಿ ಸೋಲಾಯಿತು. ನಂತರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ್ ಸಿಂಗ್ ತಿಳಿಸಿದರು.
ಜಾಗತಿಕ ಅಭ್ಯಾಸಗಳನ್ನು ಅಧ್ಯಯನ ನಡೆಸಿ, ದೇಶದಲ್ಲಿ ವ್ಯಾಪಕವಾದ ಸಮಾಲೋಚನೆ ಬಳಿಕ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.


