ಪೆರ್ಲ:ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ನಾನಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯ ಹಿತರಕ್ಷಣೆಗೆ ನಿಂತರೆ, ಕೇರಳದಲ್ಲಿ 'ಸ್ವಪ್ನ ಪದ್ಧತಿ' ಜಾರಿಗೊಳಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರಕಾರ ದೇಶ ದ್ರೋಹಿಗಳ ಬೆಂಬಲಕ್ಕೆ ನಿಂತಿದೆ.ಚಿನ್ನ ಕಳ್ಳಸಾಗಾಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜತೆಸೇರಿ ಡಾಲರ್ ಸಾಗಾಟ, ಕಿಫ್ಬಿ ಫಂಡ್ ಹಾಗೂ ವಸತಿ ಯೋಜನೆಯಲ್ಲಿ ವಂಚನೆ ನಡೆಸಿದೆ ಎಂದು ಬಿಜೆಪಿ ಕೇರಳ ರಾಜ್ಯಾಧ್ಯಕ್ಷ, ಮಂಜೇಶ್ವರ ಕ್ಷೇತ್ರ ವಿಧಾನ ಸಭೆ ಎನ್ ಡಿಎ ಅಭ್ಯರ್ಥಿ ಕೆ.ಸುರೇಂದ್ರನ್ ಆರೋಪಿಸಿದರು.
ಪೆರ್ಲ ಶಂಕರ ಸದನದಲ್ಲಿ ಬುಧವಾರ ಸಂಜೆ ನಡೆದ ಎಣ್ಮಕಜೆ ಪಂಚಾಯಿತಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕೇಂದ್ರ ಸರಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಮುಖ ನೀತಿ ಅನುಸರಿಸುವ ಕೇರಳ ಸರಕಾರ, ಯೋಜನೆಗಳ ಹೆಸರು ಬದಲಾಯಿಸಿ ವಂಚನೆ ನಡೆಸುತ್ತಿದೆ.ಪ್ರತಿ ಐದು ವರ್ಷಕ್ಕೊಮ್ಮೆ ಅದಲು ಬದಲಾಗಿ ಅಧಿಕಾರಕ್ಕೆ ಬರುವ ಎಲ್ ಡಿಎಫ್ ಮತ್ತು ಯುಡಿಎಫ್ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದೊಂದಿಗೆ ಒಂದಾಗುತ್ತಿದೆ.
ಮಂಜೇಶ್ವರದ ಬಗೆಗಿನ ಕೇರಳದ ಅವಗಣನೆಯ ಚಿತ್ರಣ ಲಾಕ್ ಡೌನ್ ಜಾರಿಗೆ ಬಂದ ಸಂದರ್ಭದಲ್ಲಿ ಜಗಜ್ಜಾಹೀರಾಗಿದೆ.ಹೆರಿಗೆ, ಇನ್ನಿತರ ತುರ್ತು ಚಿಕಿತ್ಸೆ, ಶಿಕ್ಷಣ, ಉದ್ಯೋಗ, ಐಟಿ ಕ್ಷೇತ್ರವೇ ಮಾತ್ರವಲ್ಲದೆ ಮಂಜೇಶ್ವರದ ಜನತೆ ಸೀರೆ ಖರೀದಿಗೂ ಮಂಗಳೂರನ್ನು ಆಶ್ರಯಿಸಬೇಕಾದ ಸ್ಥಿತಿ ಇದ್ದಲ್ಲಿ ಮಂಜೇಶ್ವರದ ಜನತೆಗೆ ಕೇರಳ ಸರಕಾರದ ಅಗತ್ಯ ಏನೆಂಬುದನ್ನು ಚಿಂತಿಸಬೇಕು. ಕೇರಳದ ಬದಲಾವಣೆ ಮಂಜೇಶ್ವರದಿಂದ ಆರಂಭವಾಗಲಿ ಎಂದರು.
ಕೇರಳ ಸಹ ಪ್ರಭಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರಕಾರಗಳು ಬದಲಾಗುತ್ತಿವೆ.ಅಧಿಕಾರ ಹಸ್ತಾಂತರವಾಗುತ್ತಿದೆ.ಆದರೆ ಜನಜೀವನ ಹಾಗೂ ಅಭಿವೃದ್ಧಿಯಲ್ಲಿ ಯಾವುದೇ ವ್ಯತ್ಸಾಸ ಆಗಿಲ್ಲ.ಭ್ರಷ್ಟಾಚಾರ ರಹಿತ ಕೇರಳದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ.ಮಂಜೇಶ್ವರದಲ್ಲಿ ಎನ್ ಡಿ ಎ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೇರಳದ ಅಭಿವೃದ್ಧಿ ಶೆಖೆಗೆ ಮುನ್ನುಡಿ ಇಡಬೇಕು ಎಂದರು.
ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಬಜಕೂಡ್ಲು ಅಧ್ಯಕ್ಷತೆ ವಹಿಸಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.ಬಿಜೆಪಿಗೆ ಸೇರ್ಪಡೆಗೊಂಡ ಸಿಪಿಎಂ ಪಕ್ಷದ ಕಾರ್ಯಕರ್ತರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಫುಲ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಎಣ್ಮಕಜೆ ಪಂಚಾಯಿತಿ ಉಸ್ತುವಾರಿ ಸತ್ಯಶಂಕರ ಭಟ್, ಮಂಜೇಶ್ವರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಬಾಳಿಕೆ, ಉಪಾಧ್ಯಕ್ಷೆ ಶ್ಯಾಮಲಾ ಆರ್.ಪತ್ತಡ್ಕ ಎಣ್ಮಕಜೆ ಅಧ್ಯಕ್ಷೆ ಲಲಿತಾ ಕೇಶವ್ ಉಪಸ್ಥಿತರಿದ್ದರು.
ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ್ ಅಡ್ಕಸ್ಥಳ ಸ್ವಾಗತಿಸಿದರು.ಉಪಾಧ್ಯಕ್ಷ ಶಶಿಕಾಂತ್ ಕಲ್ಯಾಟೆ ವಂದಿಸಿದರು.ಮಂಜೇಶ್ವರ ಮಂಡಲ ಕಾರ್ಯದರ್ಶಿ ಸುರೇಶ್ ವಾಣೀನಗರ ನಿರೂಪಿಸಿದರು.


