ಕಾಸರಗೋಡು: ತೆಂಕುತಿಟ್ಟಿನ ಮೇಳಗಳನ್ನು ಎತ್ತಿಹಿಡಿಯುವಲ್ಲಿ ಶ್ರೀಮದ್ ಎಡನೀರು ಮಠ ಮತ್ತು ಟಿ.ಶಾಮ ಭಟ್ ಅವರ ನೇತೃತ್ವದ ಕೀಲಾರು ಪ್ರತಿಷ್ಠಾನÀದ ಕೊಡುಗೆ ಅಪೂರ್ವವಾದುದು. ಮೇಳ ಮುನ್ನಡೆಸುವುದು ಸವಾಲು. ನಿತ್ಯ ಎದುರಾಗುವ ಸಮಸ್ಯೆಗಳ ಮಧ್ಯೆ ಹೋಲಿಕೆ ಸುಲಭ ಆದರೆ ಪರಿಹಾರಕ್ಕೆ ಸಾಧನೆ ಬೇಕು. ಈ ನಿಟ್ಟಿನಲ್ಲಿ ದಿ. ದೇವಕಾನ ಕೃಷ್ಣ ಭಟ್ಟರ ಯಕ್ಷಗಾನ ವೇಷಭೂಷಣ ಮತ್ತು ಪರಿಕರಗಳ ನಿರ್ವಹಣೆಗೆ ಸಲ್ಲಿಸಿದ ಸಾಧನೆ ಮಹತ್ತರವಾದುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ನಿರ್ವಹಣಾಧಿಕಾರಿ ಡಿ.ಹಷೇಂದ್ರ ಕುಮಾರ್ ಅವರು ತಿಳಿಸಿದರು.
ಪೈವಳಿಕೆಯ ಬೆನಕ ಯಕ್ಷಕಲಾ ವೇದಿಕೆಯ ನೇತೃತ್ವದಲ್ಲಿ ಶ್ರೀಮದ್ ಎಡನೀರು ಮಠದ ಆಶ್ರಯದಲ್ಲಿ ಶ್ರೀಮಠದ ಆವರಣದಲ್ಲಿ ಭಾನುವಾರ ಸಂಜೆ ನಡೆದ ಖ್ಯಾತ ಯಕ್ಷಗಾನ ಪ್ರಸಾಧನ ಕಲಾವಿದ, ವೇಷಧಾರಿ ದಿ. ದೇವಕಾನ ಕೃಷ್ಣ ಭಟ್ಟ ಅವರ ಸಂಸ್ಮರಣಾ ಗ್ರಂಥವನ್ನು ಎಡನೀರು ಶ್ರೀಗಳಿಗೆ ಹಸ್ತಾಂತರಿಸಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು.
ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಸಂಸ್ಮರಣಾ ನುಡಿಗಳನ್ನಾಡಿದರು. ಈ ಸಂದರ್ಭ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಹಾಗೂ ವಸ್ತ್ರಾಲಂಕಾರ ಕಲಾವಿದ ಚನಿಯಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಭಟ್ ತೆಂಕಮಾಣಿಪ್ಪಾಡಿ ಹಾಗೂ ಸತ್ಯನಾರಾಯಣ ಸೇರಾಜೆ ಸನ್ಮಾನಪತ್ರ ವಾಚಿಸಿದರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು. ಶ್ರೀಮದ್ ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಪಾರ್ವತಿ ಅಮ್ಮ ದೇವಕಾನ ಉಪಸ್ಥಿತರಿದ್ದರು. ಶ್ರೀಕೃಷ್ಣ ದೇವಕಾನ ಸ್ವಾಗತಿಸಿದರು. ಉಜಿರೆ ಅಶೋಕ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಜಾರಾಮ ದೇವಕಾನ ವಂದಿಸಿದರು.
ಬಳಿಕ ಹನುಮಗಿರಿ ಮೇಳದವರಿಂದ ಅಶೋಕ ಸುಂದರಿ, ಊರ್ವಶೀ ಶಾಪ, ಮಕರಾಕ್ಷ ಕಾಳಗ ಆಖ್ಯಾಯಿಕೆಯ ಯಕ್ಷಗಾನ ಪ್ರದರ್ಶನ ನಡೆಯಿತು.




