ಮುಂಬೈ: ಬಿಜೆಪಿ ತನ್ನ ರಾಜಕೀಯ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸುತ್ತಿದೆ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಪಕ್ಷದ ಸಂಸ್ಥಾಪಕ ಮತ್ತು ಅವರ ತಂದೆ ಬಾಳ್ ಠಾಕ್ರೆ ಅವರ 96ನೇ ಜನ್ಮ ದಿನದ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಅಧಿಕಾರದ ಮೂಲಕ ಹಿಂದುತ್ವವನ್ನು ಮುಂದಕ್ಕೆ ಕೊಂಡೊಯ್ಯಲು ಶಿವಸೇನೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಹೇಳಿದರು.
ಬಿಜೆಪಿ, ತನ್ನ ರಾಜಕೀಯ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸುತ್ತಿದೆ ಎಂದು ಆರೋಪಿಸಿದ ಅವರು, ಶಿವಸೇನೆ ರಾಜ್ಯದ ಹೊರಗೆ ತನ್ನ ಹೆಜ್ಜೆಗುರುತು ವಿಸ್ತರಿಸಲು ಹಾಗೂ ರಾಷ್ಟ್ರೀಯ ಪಾತ್ರವನ್ನು ಗುರಿಯಾಗಿರಿಸಿಕೊಂಡಿತ್ತು. ಅಕಾಲಿದಳ ಮತ್ತು ಶಿವಸೇನೆಯಂತಹ ಹಳೆಯ ಘಟಕಗಳು ಈಗಾಗಲೇ ಮೈತ್ರಿಕೂಟದಿಂದ ಹೊರನಡೆದಿರುವುದರಿಂದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಶಕ್ತಿ ಕುಗ್ಗಿದೆ ಎಂದರು.
ಹಿಂದುತ್ವಕ್ಕೆ ಅಧಿಕಾರ ಬೇಕು ಎಂಬ ಕಾರಣಕ್ಕೆ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸೇನೆ ಎಂದಿಗೂ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿಲ್ಲ ಎಂದರು. ಶಿವಸೇನೆ ಬಿಜೆಪಿಯನ್ನು ಬಿಟ್ಟಿದೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿಯ ಅವಕಾಶವಾದಿ ಹಿಂದುತ್ವ ಮಾಡುತ್ತಿದೆ ಎಂದು ಬಿಜೆಪಿ ಪಕ್ಷವನ್ನು ಟೀಕಿಸಿದರು.
ಶಿವಸೇನೆಯು ಕಳೆದ 25 ವರ್ಷಗಳಿಂದ ಬಿಜೆಪಿಯೊಂದಿಗಿನ ಮೈತ್ರಿ ವ್ಯರ್ಥವಾಯಿತು. 2019ರ ಮಹಾರಾಷ್ಟ್ರ ಚುನಾವಣೆಯ ನಂತರ ಶಿವಸೇನೆಯು ಬಿಜೆಪಿಯೊಂದಿಗಿನ ಮೈತ್ರಿ ಕಳೆದುಕೊಂಡು, ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಲು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಠಾಕ್ರೆ ಹೇಳಿದರು.

