ಬದಿಯಡ್ಕ: ಶ್ರೀಕ್ಷೇತ್ರ ಕೊಲ್ಲಂಗಾನದ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಸೋಮವಾರ ವಾರ್ಷಿಕ ನವರಾತ್ರಿ ಮಹೋತ್ಸವ ಆರಂಭಗೊಂಡಿತು. ತಂತ್ರಿ ಗಣಾಧಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀದೇವಿಗೆ ಮೊದಲ ದಿನದ ಪೂಜೆ ನಡೆಯಿತು. ಪ್ರತಿನಿತ್ಯ ಗಣಹೋಮ, ಆಯಾ ದಿನದ ದೇವತೆಗಳಿಗೆ ಹಾಗೂ ಉಪದೇವತೆಗಳಿಗೆ ಹೋಮ, ರಾತ್ರಿ ಸಹಸ್ರನಾಮಾರ್ಚನೆ, ಭದ್ರಕಾಳಿ ಅಷ್ಟೋತ್ತರ, ಕುರುದಿ ತರ್ಪಣೆ, ಕನ್ನಿಕಾರಾಧನೆ, ಅನ್ನಸಂತರ್ಪಣೆಗಳು ನಡೆಯಲಿವೆ.
ಸಮಾರಂಭದ ಅಂಗವಾಗಿ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇದರ 34ನೇ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗಾನ ವೈಭವಕ್ಕೆ ಸಂಜೆ ಚಾಲನೆ ನೀಡಲಾಯಿತು. ಈ ಸಂದರ್ಭ ಮನೋಹರ ಬಲ್ಲಾಳ್ ಅಡ್ವಳ ಅವರಿಂದ ಗಾನ ವೈಭವ ಪ್ರಸ್ತುತಿಗೊಂಡಿತು. ಮಂಗಳವಾರ ಸಂಜೆ 6 ರಿಂದ ಲಕ್ಷ್ಮೀಶ ಬೇಂಗ್ರೋಡಿ ತಮಡದವರಿಂದ ಜಾಂಬವತಿ ಕಲ್ಯಾಣ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ಬುಧವಾರ ಸಂಜೆ 6 ರಿಂದ ಲಕ್ಷ್ಮೀಶ ಬೇಂಗ್ರೋಡಿ ತಂಡದವರಿಂದ ಗಾನ ವೈಭವ ನಡೆಯಲಿದೆ. ಗುರುವಾರ ಸಂಜೆ 6 ರಿಂದ ನೀರ್ಚಾಲು ಪರಮೇಶ್ವರ ಆಚಾರ್ಯ ಕಲಾಪ್ರತಿಷ್ಠಾನದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಶುಕ್ರವಾರ ಸಂಜೆ 6 ರಿಂದ ಭರತ್ ರಾಜ್ ಶೆಟ್ಟಿ ಸಿದ್ದಕಟ್ಟೆ ಬಳಗದವರಿಂದ ಗಾನ ವೈಭವ ನಡೆಯಲಿದೆ. ಶನಿವಾರ ಸಂಜೆ 6 ರಿಂದ ಮಾನ್ಯ ವಿಶ್ವನಾಥ ರೈ ತಂಡದವರಿಂದ ಭೀಷ್ಮ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ. ಅ.2 ರಂದು ಭಾನುವಾರ ಸಂಜೆ 6 ರಿಂದ ಸುಮನ್ ರಾಜ್ ನೀಲಂಗಳ ಮತ್ತು ತಂಡದವರಿಂದ ಗಾನ ವೈಭವ ನಡೆಯಲಿದೆ. ಅ.3 ರಂದು ಸಂಜೆ 6 ರಿಂದ ಕಂಬಾರು ಕೇಶವ ಭಟ್ ಮತ್ತು ತಂಡದವರಿಂದ ಮೋಕ್ಷ ಸಂಗ್ರಾಮ ತಾಳಮದ್ದಳೆ ನಡೆಯಲಿದೆ. ಅ.4 ರಂದು ಬೆಳಿಗ್ಗೆ 10 ಕ್ಕೆ ಗಮಕಕಲಾಸಂಘ ನಾರಾಯಣಮಂಗಲ ತಂಡದ ಕೇಶವ ಭಟ್ ಕಂಬಾರು ಮತ್ತು ಬಾಲಕೃಷ್ಣ ಆಚಾರ್ಯ ನೀರ್ಚಾಲು ಅವರಿಂದ ಪುರಾಣ ವಾಚನ-ಪ್ರವಚನ ನಡೆಯಲಿದೆ. ಸಂಜೆ 6 ರಿಂದ ಶಶಿ ಆಚಾರ್ಯ ಉಡುಪಿ ಮತ್ತು ತಂಡದವರಿಂದ ಬಡಗುತಿಟ್ಟು ಯಕ್ಷ ನಾಟ್ಯ ವೈಭವ ನಡೆಯಲಿದೆ. ರಾತ್ರಿ 11 ರಿಂದ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಅ.5 ರಂದು ಬುಧವಾರ ಸಂಜೆ 6 ರಿಂದ ಸಮಾರೋಪ ಸಮಾರಂಭ, ರಾತ್ರಿ 12 ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.

