ಬೆಂಗಳೂರು: 'ಚಂದ್ರಯಾನ-3 ಯೋಜನೆಯ ಕೊನೆಯ ಹಂತದ ಭಾಗವಾಗಿ ಚಂದ್ರನ ಅಂಗಳದಲ್ಲಿ ಇಳಿಯಲು ನೌಕೆಯಿಂದ ರೋವರ್ ಹೊತ್ತ ಲ್ಯಾಂಡರ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ನೆರವೇರಿತು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
0
samarasasudhi
ಆಗಸ್ಟ್ 17, 2023
ಬೆಂಗಳೂರು: 'ಚಂದ್ರಯಾನ-3 ಯೋಜನೆಯ ಕೊನೆಯ ಹಂತದ ಭಾಗವಾಗಿ ಚಂದ್ರನ ಅಂಗಳದಲ್ಲಿ ಇಳಿಯಲು ನೌಕೆಯಿಂದ ರೋವರ್ ಹೊತ್ತ ಲ್ಯಾಂಡರ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ನೆರವೇರಿತು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಮುಂದಿನ ಹಂತದ ಕಾರ್ಯಾಚರಣೆ ಶುಕ್ರವಾರ ನಡೆಯಲಿದೆ. ಇದರಲ್ಲಿ ಚಂದ್ರನ ಸುತ್ತ ಇರುವ ಇನ್ನಷ್ಟು ಸಮೀಪದ ಕಕ್ಷೆಗೆ ಲ್ಯಾಂಡರ್ ಇಳಿಯಲಿದೆ. ಶುಕ್ರವಾರ ಸಂಜೆ 4ಕ್ಕೆ ಈ ಪ್ರಕ್ರಿಯೆ ನಡೆಯಲಿದೆ ಎಂಬ ವಿಷಯವನ್ನು ಮೈಕ್ರೊ ಬ್ಲಾಗಿಂಗ್ 'ಎಕ್ಸ್' (ಟ್ವಿಟರ್)ನಲ್ಲಿ ಇಸ್ರೊ ಹಂಚಿಕೊಂಡಿದೆ.
ಜುಲೈ 14ರಂದು ಶ್ರೀಹರಿಕೋಟಾದ ರಾಕೇಟ್ ಉಡ್ಡಯನ ಕೇಂದ್ರದಿಂದ ಚಂದ್ರಯಾನ-3 ಪ್ರಕ್ರಿಯೆ ಆರಂಭಗೊಂಡಿತು. ಆ. 5ರಂದು ನೌಕೆಯು ಚಂದ್ರನ ಕಕ್ಷೆ ಸೇರಿತು. ನಂತರ ಚಂದ್ರನ ಅಂಗಳಕ್ಕೆ ಇಳಿಸುವ ನಿಟ್ಟಿನಲ್ಲಿ ಪ್ರತಿ ಹಂತದ ಕಕ್ಷೆಯನ್ನು 6, 9, 14 ಹಾಗೂ 16ರಂದು ಕ್ರಮವಾಗಿ ಇಳಿಸಲಾಯಿತು. ನೋದನ (ಪ್ರೊಪಲ್ಷನ್ ಮಾಡ್ಯೂಲ್)ನಿಂದ ಲ್ಯಾಂಡರ್ ಹಾಗೂ ರೋವರ್ ಗುರುವಾರ ಪ್ರತ್ಯೇಕಗೊಂಡಿತು.
ಬುಧವಾರ ನಡೆದ ಕಕ್ಷೆ ಬದಲಾವಣೆಯು ಎಂಜಿನ್ ದಹನ ಪ್ರಕ್ರಿಯೆ ಮೂಲಕ ನಡೆಯಿತು. ನೋದನ ಘಟಕದಿಂದ ಲ್ಯಾಂಡರ್ ಪ್ರತ್ಯೇಕಗೊಂಡ ಬಳಿಕ ಕಕ್ಷೆಯಲ್ಲಿ ಅದರ ವೇಗವನ್ನು ತಗ್ಗಿಸುವ ಪ್ರಕ್ರಿಯೆಯನ್ನು 'ಡಿಬೂಸ್ಟ್' ಎಂದು ಕರೆಯಲಾಗುತ್ತದೆ. ಆ. 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಹಾಗೂ ರೋವರ್ ಇಳಿಸುವ ಪ್ರಕ್ರಿಯೆ ನಡೆಸಲು ಇಸ್ರೊ ಸಿದ್ಧತೆ ನಡೆಸಿದೆ.