ನವದೆಹಲಿ: ರಾಜ್ಯಗಳ ಸ್ವಾಯತ್ತತೆಯು ಸಂವಿಧಾನದ ಮೂಲ ಆಶಯವಾಗಿದೆ. ಏಕರೂಪತೆಯನ್ನು ಸಾಧಿಸುವ ಭರದಲ್ಲಿ ದೇಶದ ವೈವಿಧ್ಯತೆಯನ್ನು ಕಳೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ
ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠ ಈ ಮಾತನ್ನು ಹೇಳಿತು.
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಪರವಾಗಿ ಬುಧವಾರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುವಾಗ, ಸಂವಿಧಾನಕ್ಕೆ ತಿದ್ದುಪಡಿ ತರಲು ಆಗುವುದಿಲ್ಲ ಎಂದು ಹೇಳಿದರು.
ಸಂವಿಧಾನದ 356ನೇ ವಿಧಿ (ರಾಷ್ಟ್ರಪತಿ ಆಳ್ವಿಕೆ) ಅಡಿಯಲ್ಲಿ ಅಧಿಕಾರವನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳಲಾಗಿದೆ. ಇದು ಸಂವಿಧಾನವನ್ನು ತಿದ್ದುಪಡಿ ಮಾಡಲು ನೀಡಿದ ಅಧಿಕಾರವಲ್ಲ ಎಂದು ಅವರು ಪ್ರತಿಪಾದಿಸಿದರು.
ಸಂವಿಧಾನದ 239ಎ (ಸಂಸತ್ಗೆ ಸ್ಥಳೀಯ ಶಾಸಕಾಂಗ ಅಥವಾ ಮಂತ್ರಿ ಮಂಡಳ ಅಥವಾ ಕೆಲವು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸುವ ಅಧಿಕಾರ) ಉಲ್ಲೇಖಿಸಿದ ಧವನ್, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವಾಗ ಇದು ಪಾಲನೆಯಾಗಿಲ್ಲ ಎಂದರು.
'ಕಾಶ್ಮೀರಿಯನ್ನು ಸಂವಿಧಾನದ ಎಂಟನೇ ಪರಿಚ್ಛೇದದ ಅಡಿಯಲ್ಲಿ ಅಧಿಕೃತ ಭಾಷೆಯಾಗಿ ಗುರುತಿಸಲಾಗಿದೆ. ಈಗ ಕಾಶ್ಮೀರಿಗಳ ಸ್ಥಿತಿ ಏನಾಗಿದೆ? ಎಂಟನೇ ಪರಿಚ್ಛೇದದಿಂದ ಅದು ಕಣ್ಮರೆಯಾಯಿತೆ?' ಎಂದರು.
ಸಂವಿಧಾನದ ಯಾವುದೇ ನಿಬಂಧನೆಯನ್ನು ರಾಷ್ಟ್ರಪತಿ ಅಮಾನತುಗೊಳಿಸಿದರೆ, ಅದು ಪ್ರಾಸಂಗಿಕ ಅಥವಾ ಪೂರಕವಲ್ಲ ಎಂಬ ಕಾರಣಕ್ಕಾಗಿ ಅದನ್ನು ಪ್ರಶ್ನಿಸಬಹುದೇ? ಅಥವಾ ಈ ಪದಗಳು ಸಂವಿಧಾನದ 356(1)(ಬಿ) ವಿಧಿಯ ಮೊದಲ ಭಾಗದ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆಯೇ? ಎಂದು ಪೀಠವು ವಕೀಲ ಧವನ್ ಅವರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಧವನ್ ಅವರು, ಸಂವಿಧಾನದ ಪರಿಚ್ಛೇದ 356(1)(ಸಿ) ಅಡಿಯಲ್ಲಿ ಚಲಾಯಿಸುವ ಅಧಿಕಾರವು ವಿಧಿ 3 (ಹೊಸ ರಾಜ್ಯಗಳನ್ನು ರಚಿಸಲು ಸಂಸತ್ತಿನ ಕಾರ್ಯವಿಧಾನ) ಅಡಿಯಲ್ಲಿ ನೀಡಲಾದ ಕಡ್ಡಾಯ ನಿಬಂಧನೆಯನ್ನು ದುರ್ಬಲಗೊಳಿಸುವುದಿಲ್ಲ ಎಂದು ಪ್ರತಿಪಾದಿಸಿದರು.
ಆದಾಗ್ಯೂ, ಇಂತಹ ವಿಶಾಲ ಪ್ರತಿಪಾದನೆಯು ಸ್ವೀಕಾರಾರ್ಹವಲ್ಲ. ಏಕೆಂದರೆ ಗಣನೆಗೆ ತೆಗೆದುಕೊಳ್ಳಬೇಕಾದ ಸಂದರ್ಭಗಳಿವೆ. 356 ನೇ ವಿಧಿಯ ಅಸ್ತಿತ್ವದ ಸಮಯದಲ್ಲಿ ಸಂಸತ್ತು ಕಾನೂನನ್ನು ಜಾರಿಗೊಳಿಸಬಹುದೇ? ರಾಜ್ಯದ ಗಡಿಗಳನ್ನು ಬದಲಾಯಿಸುವಂತಹ ರಾಜ್ಯ ಶಾಸಕಾಂಗಗಳಿಗೆ ನಿರ್ದಿಷ್ಟವಾಗಿ ನೀಡಲಾದ ಅಧಿಕಾರವನ್ನು ಸಂಸತ್ತು ಚಲಾಯಿಸಲು ಸಾಧ್ಯವಿಲ್ಲವೇ ಎಂದು ಪೀಠವು ಧವನ್ ಅವರನ್ನು ಪ್ರಶ್ನಿಸಿತು.
370ನೇ ವಿಧಿ ಮೂಲಭೂತ ರಚನೆಯ ಒಂದು ಭಾಗವಾಗಿದೆ, ಅದನ್ನು ಉಲ್ಲಂಘಿಸಲಾಗದು ಎಂದು ಧವನ್ ಒತ್ತಿ ಹೇಳಿದರು.
ಅರ್ಜಿದಾರರ ಪರ ಹಿರಿಯ ವಕೀಲ ದುಷ್ಯಂತ್ ದವೆ ಅವರು, ಕೇಂದ್ರವು ಮುಂದಿಡಬಹುದಾದ ರಾಷ್ಟ್ರೀಯ ಹಿತಾಸಕ್ತಿಯ ಯಾವುದೇ ವಾದವನ್ನು ಸಾಂವಿಧಾನಿಕತೆ ತಳ್ಳಿಹಾಕುತ್ತದೆ ಎಂದು ಪ್ರತಿಪಾದಿಸಿದರು.

.webp)
