ನವದೆಹಲಿ: ನ್ಯಾಯಾಲಯದ ದೈನಂದಿನ ಕಾರ್ಯ ಕಲಾಪಗಳಲ್ಲಿ ನ್ಯಾಯಾಧೀಶರು ಹಾಗೂ ವಕೀಲರಿಗೆ ನೆರವಾಗುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಲಿಂಗತ್ವ ಸಿದ್ಧ ಮಾದರಿಯ ಕೈಪಿಡಿಯನ್ನು ಬಿಡುಗಡೆ ಮಾಡಿದೆ.
ನ್ಯಾಯಾಲಯದ ತೀರ್ಪುಗಳು ಮತ್ತು ಆದೇಶಗಳಲ್ಲಿ ಮಹಿಳೆಯರ ಬಗ್ಗೆ ಬರೆಯುವಾಗ 'ಕರ್ತವ್ಯ ನಿಷ್ಠೆ ಪತ್ನಿ', 'ವಿಧೇಯ ಪತ್ನಿ', 'ಉಪಪತ್ನಿ', 'ವ್ಯಭಿಚಾರಿಣಿ', 'ವೇಶ್ಯೆ', 'ಸೂಳೆ', 'ಪ್ರೇಯಸಿ', 'ಅವಿವಾಹಿತೆ' ಇತ್ಯಾದಿ ಪದಪುಂಜಗಳನ್ನು ಬಳಸಲಾಗುತ್ತದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನ್ಯಾಯಾಲಯದಲ್ಲಿ ಈ ಕೈಪಿಡಿ ಸಿದ್ಧಪಡಿಸಿರುವುದನ್ನು ಘೋಷಿಸಿದರು.
'ನ್ಯಾಯಾಂಗದ ಕರಡು ಸಿದ್ಧಪಡಿಸುವಿಕೆ, ಆದೇಶ ಹಾಗೂ ತೀರ್ಪುಗಳಲ್ಲಿ ಮಹಿಳೆಯರನ್ನು ಕುರಿತು ಬರೆಯುವಾಗ ಈ ಪದಕೋಶವು ನ್ಯಾಯಾಧೀಶರಿಗೆ ನೆರವಾಗುತ್ತದೆ. ಸ್ತ್ರೀಯರ ಬಗ್ಗೆ ಈಗಾಗಲೇ ಬಳಕೆಯಲ್ಲಿರುವ ಪದಗಳು ಅಥವಾ ನುಡಿಗಟ್ಟುಗಳನ್ನು ಬಳಸುವ ಬದಲು ಕೈಪಿಡಿಯಲ್ಲಿ ಪ್ರಕಟಿಸಿರುವ ಪದಗಳನ್ನು ಬಳಸಬೇಕಿದೆ' ಎಂದು ಹೇಳಿದರು.
'ಈಗಾಗಲೇ, ನ್ಯಾಯಾಲಯಗಳಲ್ಲಿ ಲಿಂಗತ್ವ ಸಿದ್ಧ ಮಾದರಿಯ ಪದಗಳು ಬಳಕೆಯಾಗಿವೆ. ನಾನು ಹಿಂದಿನ ತೀರ್ಪುಗಳನ್ನು ಟೀಕಿಸುವ ಅಥವಾ ಅವುಗಳ ಬಗ್ಗೆ ಅನುಮಾನಪಡುವ ಉದ್ದೇಶ ಹೊಂದಿಲ್ಲ. ಆದರೆ, ಈ ಮಾದರಿ ಬಗ್ಗೆ ತಿಳಿಯದೆ ಹೇಗೆ ಉದ್ಯೋಗಿಗಳಾಗುತ್ತಾರೆ ಎಂಬುದನ್ನು ಇದು ತೋರ್ಪಡಿಸುತ್ತದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳು ಹಾಗೂ ಎದುರಾಗುವ ಕಾನೂನು ಸಮಸ್ಯೆಗಳನ್ನು ನಿರ್ಣಯಿಸುವಾಗ ಈ ಪದಕೋಶ ನೆರವಾಗಲಿದೆ' ಎಂದು ಸಿಜೆಐ ಹೇಳಿದರು.
ಕೈಪಿಡಿಯಲ್ಲಿ ಏನಿದೆ?:
ಕೋರ್ಟ್ ತೀರ್ಪುಗಳು ಮತ್ತು ಆದೇಶಗಳಲ್ಲಿ ಸಾಮಾನ್ಯವಾಗಿ ಮಹಿಳೆಯರನ್ನು ಕುರಿತು ಬಳಸುವ ಪದಗಳ ಬಗ್ಗೆ ಈ ಕೈಪಿಡಿಯಲ್ಲಿ ಗುರುತಿಸಲಾಗಿದೆ. ಜೊತೆಗೆ, ಅವುಗಳಿಗೆ ಪರ್ಯಾಯವಾಗಿ ಯಾವ ಪದಗಳನ್ನು ಇನ್ನು ಮುಂದೆ ಬಳಸಬೇಕಿದೆ ಎಂಬ ಬಗ್ಗೆ ವಿವರಿಸಲಾಗಿದೆ.
'ನ್ಯಾಯಾಧೀಶರಿಗೆ ತಮ್ಮ ತೀರ್ಪು ಬರೆಯುವ ವೇಳೆಯಲ್ಲಷ್ಟೇ ಇದು ನೆರವಾಗುವುದಿಲ್ಲ. ಲಿಂಗತ್ವ ಸಿದ್ಧ ಮಾದರಿ ಪದಗಳ ಬಳಕೆಯ ಬದಲಾವಣೆಗೂ ಇದು ಸಹಕಾರಿಯಾಗಲಿದೆ' ಎಂದು ಮೂವತ್ತು ಪುಟಗಳಿರುವ ಈ ಕೈಪಿಡಿಯಲ್ಲಿ ಹೇಳಲಾಗಿದೆ.
ಉದಾಹರಣೆಗೆ 'ಉಪಪತ್ನಿ', 'ಪ್ರೇಯಸಿ' ಪದಕ್ಕೆ ಬದಲಾಗಿ ವ್ಯಕ್ತಿಯ ಜೊತೆಗೆ ಪ್ರಣಯ ಸಂಬಂಧ ಹೊಂದಿರುವವರು ಅಥವಾ ಮದುವೆಯ ಹೊರತಾಗಿ ಲೈಂಗಿಕ ಸಂಬಂಧ ಹೊಂದಿರುವವರು ಎಂದು ಬಳಸಬೇಕಿದೆ. ವೇಶ್ಯೆ, ಸೂಳೆ ಎಂಬ ಪದಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಈ ಕೈಪಿಡಿಯನ್ನು ಅಪ್ಲೋಡ್ ಮಾಡಲಾಗಿದೆ.
ಪ್ರತಿ ಪ್ರಕರಣದ ಅರ್ಹತೆಯ ಮೇಲೆ ನ್ಯಾಯಾಲಯಗಳ ತೀರ್ಪುಗಳು ನಿರ್ಧಾರವಾಗುತ್ತವೆ. ಎಂದಿಗೂ ಲಿಂಗತ್ವ ಸಿದ್ಧ ಮಾದರಿಯನ್ನು ಅವಲಂಬಿಸಿರುವುದಿಲ್ಲ. ಹಾಗಾಗಿ, ಮಹಿಳೆಯರ ಬಗ್ಗೆ ಬಳಸುವ ಸಿದ್ಧ ಮಾದರಿಯ ಪದಗಳ ಬಳಕೆಯ ಪ್ರಮಾಣವನ್ನು ಕಡಿಮೆಗೊಳಿಸುವುದೇ ಈ ಪದಕೋಶದ ಮೂಲ ಆಶಯವಾಗಿದೆ ಎಂದು ವಿವರಿಸಲಾಗಿದೆ.

.webp)
