ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ವತಿಯಿಂದ 19ನೇ ವರ್ಷದ ರಂಗ ಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 24ರಂದು ಸಂಜೆ 3ಕ್ಕೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಶುಭಾಶೀರ್ವಾದ ಹಾಗೂ ದಿವ್ಯ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ಜರುಗಲಿದೆ. ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಕಲಾವಿದ ಮಾಧವ ಪಾಟಾಳಿ ಅವರಿಗೆ ಶ್ರೀ ಎಡನೀರು ಕೇಶವಾನಂದ ಭಾರತೀ ಸ್ಮಾರಕ ಪ್ರಶಸ್ತಿ ನೀಡಲಾಗುವುದು.
ಯಕ್ಷಗಾನಕ್ಕೆ ಸಲ್ಲಿಸಿದ ಕೊಡುಗೆ ಪರಿಗಣಿಸಿ ರಾಮ್ ಎಲ್ಲಂಗಲ ಹಾಗೂ ಸಂಗೀತ ಕ್ಷೇತ್ರದಲ್ಲಿ ಶಕುಂತಲಾ ಕೃಷ್ಣಭಟ್ ಕುಂಚಿನಡ್ಕ ಅವರಿಗೆ ರಂಗ ಚಿನ್ನಾರಿ ಪರಶಸ್ತಿ, ಸಿನಿಮಾ ಕ್ಷೇತ್ರದಲ್ಲಿ ನಡೆಸಿರುವ ಸಾಧನೆಗಾಗಿ ಕಿರಣ್‍ರಾಜ್ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೀಕ್ಷಾ ಕೆ.ಅವರಿಗೆ ರಂಗಚಿನ್ನಾರಿ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿಪ್ರದಾನ ಮಾಡಿ ಆಶೀರ್ವಚನ ನೀಡುವರು. ಧಾರ್ಮಿಕ ಮುಂದಾಳು, ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ ಕಾಪಿಕ್ಕಾಡ್ ಅಭಿನಂದನಾ ಭಾಷಣ ಮಾಡುವರು. ಖ್ಯಾತ ಪತ್ರಕರ್ತ ರವೀಂದ್ರ ಜೋಷಿ ಮೈಸೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.


