ಸುಳ್ಯ: ತುಳುನಾಡಿನ ಭಾಷಾ, ಸಂಸ್ಕøತಿ ಉಳಿವಿಗೆ ಶತಮಾನ ಪರಂಪರೆಯ ಪೂರಕ ವೇದಿಕೆಯಾಗಿರುವ ತುಳುವ ಮಹಾಸಭೆ, ತನ್ನ ಪುನಶ್ಚೇತನ ಚಟುವಟಿಕೆಯೊಳಗೆ 97ನೇ ವರ್ಷವನ್ನು ಆಚರಿಸುತ್ತಿದ್ದು, 1928ರಲ್ಲಿ ಆರಂಭಗೊಂಡ ಈ ಮಹಾಸಭೆ ಇನ್ನು ಮೂರು ವರ್ಷಗಳಲ್ಲಿ ಶತಮಾನೋತ್ಸವದ ಮಹತ್ವದ ಮೈಲಿಗಲ್ಲು ತಲುಪಲಿದೆ. ಈ ಹಿನ್ನಲೆಯಲ್ಲಿ ತಾಲೂಕು ಮಟ್ಟದಲ್ಲಿ ಶಕ್ತಿ ತುಂಬಿದ ನಾಯಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಸುಳ್ಯ ತಾಲೂಕು ಘಟಕದ ಸಂಚಾಲಕರಾಗಿ ಮಿಲನ್ ಗೌಡ ಬಾಳಿಕಳ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಾಜ ಶಾಸ್ತ್ರದಲ್ಲಿ ಪದವಿ ಮತ್ತು ಎಂ.ಎಸ್.ಡಬ್ಲ್ಯೂ. ಪದವಿದರರಾದ ಮಿಲನ್ ಗೌಡ ಬಾಳಿಕಳ ಅವರು ಧಾರ್ಮಿಕ ಕ್ಷೇತ್ರ ಹಾಗೂ ಕ್ರೀಡಾ ಚಟುವಟಿಕೆಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ್ದು, ತಮ್ಮ ಗ್ರಾಮೀಣ ಸಮುದಾಯದ ಒಳಗೊಂಡು ಸಾಂಸ್ಕೃತಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಅವರು ಬಾಳಿಕಳ ಬೂಡು ಶ್ರೀ ಪದ್ಮಾವತಿ ಮತ್ತು ಶ್ರೀ ಉಳ್ಳಾಕುಲು ಸೇವಾ ಸಮಿತಿ (ರಿ) ಇದರ ಪ್ರಮುಖ ಪದಾಧಿಕಾರಿಯಾಗಿ ಧಾರ್ಮಿಕ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ.
ಇದೆ ವೇಳೆ ಅವರು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಸ್ನೇಹಿ ಸೇವೆಗಳ ಮೂಲಕ ಸಮಾಜಿಕ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತಿದ್ದಾರೆ.
ತುಳುವ ಮಹಾಸಭೆಯ ಶತಮಾನೋತ್ಸವದ ದೃಷ್ಟಿಯಿಂದ ಜಾರಿಗೊಳಿಸಲಾದ ಮಹತ್ವದ ಯೋಜನೆಗಳಲ್ಲಿ:
ತುಳುನಾಡಿನ ಕಲಾ, ಸಾಹಿತ್ಯ ಮತ್ತು ಜನಪದ ಪರಂಪರೆಯ ಜೀವಂತಿಕರಣ, ತುಳುನಾಡ ಕಳರಿ ತರಬೇತಿ ಹಾಗೂ ಮರ್ಮ ಚಿಕಿತ್ಸೆಯ ಪುನಶ್ಚೇತನ, ನಶಿಸಿ ಹೋಗುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ ಜಾತಿ–ಮತ–ಭಾಷಾ ಸೌಹಾರ್ದತೆಯ ಸಂರಕ್ಷಣೆ ಇತ್ಯಾದಿ ಒಳಗೊಂಡಿದ್ದು, ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರೂಪಿಸಲಾಗುತ್ತಿದೆ. ಸುಳ್ಯದಲ್ಲಿ ಮಿಲನ್ ಗೌಡ ಬಾಳಿಕಳ ಅವರ ನೇತೃತ್ವ ಈ ಕಾರ್ಯಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಮಹಾಸಭೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


