ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ, ಫ್ಯಾಶನ್ ಡಿಸೈನಿಂಗ್ ಮತ್ತು ತಂತ್ರಜ್ಞಾನ ಪೂರ್ಣಗೊಳಿಸಿದವರಿಗೆ ಟೈಲರಿಂಗ್ ಯಂತ್ರಗಳನ್ನು ವಿತರಿಸಲಾಯಿತು. ಜೊತೆಗೆ ಎಸ್‍ಎಸ್‍ಎಲ್‍ಸಿ ಪ್ಲಸ್ ಟು ಉತ್ತೀರ್ಣರಾದವರಿಗೆ ವೃತ್ತಿ ಮಾರ್ಗದರ್ಶನ ತರಗತಿಯನ್ನು ಆಯೋಜಿಸಲಾಯಿತು. ಭೀಮನಡಿ ಬುಡಕಟ್ಟು ವಿಸ್ತರಣಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ ಲಕ್ಷ್ಮಿ ಉದ್ಘಾಟಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಭೀಮನಡಿ ಐಟಿಐನಿಂದ ಫ್ಯಾಶನ್ ಡಿಸೈನಿಂಗ್ ಮತ್ತು ತಂತ್ರಜ್ಞಾನದಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದ ಈಸ್ಟ್ ಎಳೇರಿ, ವೆಸ್ಟ್ ಎಳೇರಿ, ಕಿನನೂರು ಕರಿಂದಳ ಮತ್ತು ಬಳಾಲ್ ಗ್ರಾಮ ಪಂಚಾಯತ್‍ಗಳ 28 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು.
ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರೂ, ಅಗತ್ಯ ಯಂತ್ರೋಪಕರಣಗಳ ಕೊರತೆಯಿಂದಾಗಿ ಅನೇಕ ಜನರಿಗೆ ಉದ್ಯೋಗ ಲಭಿಸಿಲ್ಲ. ಈ ಪರಿಸ್ಥಿತಿಯಲ್ಲಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಕಾರ್ಪಸ್ ನಿಧಿಯ ಮೂಲಕ 3.5 ಲಕ್ಷ 20 ಸಾವಿರ ರೂ. ಮೌಲ್ಯದ ಹೊಲಿಗೆ ಯಂತ್ರಗಳನ್ನು ವಿತರಿಸಿತು. ಈ ಮೂಲಕ ಗುಡ್ಡಗಾಡು ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಉದ್ಯೋಗ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಭೀಮನಡಿ ಬುಡಕಟ್ಟು ವಿಸ್ತರಣಾ ಅಧಿಕಾರಿ ಬಾಬು ಹೇಳಿದರು. ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಇ.ಟಿ. ಜೋಸ್, ಟಿ.ವಿ. ರಾಜೀವನ್ ಮತ್ತು ಪರಪ್ಪ ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಕೆ. ಮಧುಸೂದನನ್ ಉಪಸ್ಥಿತರಿದ್ದರು. ಭೀಮನಡಿ ಬುಡಕಟ್ಟು ವಿಸ್ತರಣಾಧಿಕಾರಿ ಎ. ಬಾಬು ಸ್ವಾಗತಿಸಿ, ಹರ್ಷಶೇಖರನ್ ವಂದಿಸಿದರು.


