ನವದೆಹಲಿ: ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಮರಣದಂಡನೆಗೆ ಗುರಿಪಡಿಸಲು ಯೆಮೆನ್ ಜೈಲು ಅಧಿಕಾರಿಗಳು ನಿರ್ಧರಿಸಿದ್ದರು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಅವರು ತನ್ನ ಕ್ಲಿನಿಕ್ ಪಾಲುದಾರನಾಗಿದ್ದ ಯೆಮೆನ್ ದೇಶದ ಪ್ರಜೆ ತಲಾಲ್ ಅಬ್ದು ಮಹ್ದಿ ಎಂಬವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. 2017ರಲ್ಲಿ ಕೊಲೆ ಪ್ರಕರಣ ನಡೆದಿತ್ತು.
ಯೆಮೆನ್‌ನ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಯೆಮೆನ್‌ನ 'ಸುಪ್ರೀಂ ಜುಡಿಷಿಯಲ್ ಕೌನ್ಸಿಲ್' 2023ರ ನವೆಂಬರ್‌ನಲ್ಲಿ ಈ ಶಿಕ್ಷೆ ಎತ್ತಿ ಹಿಡಿದಿತ್ತು.
ಸದ್ಯ ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.
ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಮಧ್ಯಸ್ಥಿಕೆ:
ನಿಮಿಷಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಧ್ಯಪ್ರವೇಶಿಸಿದ್ದಾರೆ. ಶೇಖ್ ಅಬೂಬಕ್ಕರ್ ಅವರು ಯೆಮನ್‌ನಲ್ಲಿರುವ ಧಾರ್ಮಿಕ ಮುಖಂಡ ಶೇಖ್ ಹಬೀರ್ ಉಮರ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇದರಲ್ಲಿ ಮಹ್ದಿ ಕುಟುಂಬದ ಸದಸ್ಯರು ಭಾಗವಹಿಸಿದ್ದಾರೆ. ನಿಮಿಷಾ ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತ 'ಬ್ಲಡ್ ಮನಿ' ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ, ಈ ಕುರಿತು ಇದುವರೆಗೂ ಅಧಿಕೃತ ಸಂದೇಶವು ಪ್ರಕಟಗೊಂಡಿಲ್ಲ.

