ಮಂಜೇಶ್ವರ: ಓಣಂ ಹಬ್ಬ ಸಮೀಪಿಸುತ್ತಿದ್ದಂತೆ ಇತರ ರಾಜ್ಯಗಳಿಂದ ಕಾಸರಗೋಡಿಗೆ ಭಾರೀ ಪ್ರಮಾಣದಲ್ಲಿ ಮದ್ಯ, ಗಾಂಜಾ ಸೇರಿದಂತೆ ಮಾದಕ ದ್ರವ್ಯ ಸಾಗಾಟ ನಡೆಯುತ್ತಿದ್ದು, ಅಬಕಾರಿ ದಳ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ. ಅಬಕಾರಿ ಕಾಸರಗೋಡು ರೇಂಜ್ ಅಧಿಕಾರಿಗಳು ಕಾಸರಗೋಡು ನೆಲ್ಲಿಕುಂಜೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 34.56ಲೀ.ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದುಕಸಬಾ ಕಡಪ್ಪುರ ನಿವಾಸಿ ಅಶೋಕನ್ ಎಂಬಾತನನ್ನು ಬಂಧಿಸಿದ್ದಾರೆ. ಮದ್ಯ ಸಾಗಾಟಕ್ಕೆ ಬಳಸಿದ್ದ ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಮೀಯಪದವಿನಲ್ಲಿ ಕುಂಬಳೆ ರೇಂಜ್ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕಿನಲ್ಲಿ ಸಾಗಿಸುತ್ತಿದ್ದ 8.46ಲೀ. ವಿದೇಶಿ ಮದ್ಯ ವಶಪಡಿಸಿಕೊಂಡಿದ್ದು, ಮೀಯಪದವು ಕೈದಪಡ್ಪು ನಿವಾಸಿ ಶಶಿಕುಮಾರ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಬದಿಯಡ್ಕ ಸನಿಹದ ಕನ್ಯಪ್ಪಾಡಿ-ಮುಂಡಿತ್ತಡ್ಕ ರಸ್ತೆಯ ಚೆನ್ನೆಗುಳಿಯಲ್ಲಿ ಬದಿಯಡ್ಕ ರೇಂಜ್ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾಯಾಚರಣೆಯಲ್ಲಿ 3.78ಲೀ. ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಪಾಡಲಡ್ಕ ನಿವಾಸಿ ವಿಶ್ವನಾಥ ಎಂಬತನನ್ನು ಬಂಧಿಸಿದ್ದಾರೆ. ಪೆರಿಯ ಕುಣಿಯ ಆಯಂಬಾರೆ ಎಂಬಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಬಿಹಾರ ನಿವಾಸಿ ಹರಿಲಾಲ್ ಮಖ್ಯ ಎಂಬಾತನನ್ನು ಬಂಧಿಸಿದ್ದಾರೆ. ಈತನ ವಶದಲ್ಲಿದ್ದ 125ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

