HEALTH TIPS

ಹರಿಯಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 348 ಆರೋಪಿಗಳು ಒಂದೇ ದಿನ ಜೈಲಿಗೆ

ಚಂಡೀಗಢ: ಅಪರಾಧ ಚಟುವಟಿಕೆಗಳ ವಿರುದ್ಧ ‌ರಾಜ್ಯದಾದ್ಯಂತ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 348 ಆರೋಪಿಗಳನ್ನು ಬಂಧಿಸಲಾಗಿದೆ. ದರೋಡೆಯಂತಹ ಘೋರ ಕೃತ್ಯಗಳಲ್ಲಿ ಭಾಗಿಯಾದ 35 ಮಂದಿಯೂ ಈ ಪಟ್ಟಿಯಲ್ಲಿದ್ದಾರೆ ಎಂದು ಹರಿಯಾಣ ಪೊಲೀಸ್‌ ಇಲಾಖೆ ಶುಕ್ರವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಅಪರಾಧ ಜಾಲಕ್ಕೆ ಕಡಿವಾಣ ಹಾಕಲು, ಮಾದಕವಸ್ತು ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ತಡೆಯೊಡ್ಡುವ ಮೂಲಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌ ಅವರು ನೀಡಿದ್ದ ನಿರ್ದೇಶನದಂತೆ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.

ಕಾರ್ಯಾಚರಣೆ ವೇಳೆ ವಿವಿಧ ಜಿಲ್ಲೆಗಳಲ್ಲಿ ಗಾಂಜಾ, ಹೆರಾಯಿನ್, ಚರಸ್‌, ಅಫೀಮು, ಭುಕ್ಕಿ ಸೇರಿದಂತೆ 65 ಕೆ.ಜಿ.ಗೂ ಅಧಿಕ ಮಾದಕವಸ್ತುಗಳನ್ನು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯದ ಮಾತ್ರೆಗಳು, ನಿಷೇಧಿತ ಔಷದಗಳನ್ನೂ ವಶಪಡಿಸಿಕೊಂಡಿದ್ದಾರೆ.

8 ಪಿಸ್ತೂಲ್‌ಗಳು, ಅಷ್ಟೇ ಕಾರ್ಟ್ರಿಡ್ಜ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 16 ಪ್ರಕರಣ ದಾಖಲಾಗಿದ್ದು, 22 ಮಂದಿಯನ್ನು ಬಂಧಿಸಲಾಗಿದೆ. ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಆಸ್ತಿಯೊಂದನ್ನು ನಾಶಮಾಡಲಾಗಿದೆ. ಈ ಸಂಬಂಧ ಎಂಟು ಮಂದಿ ವಿರುದ್ಧ ಲುಕ್-ಔಟ್ ನೋಟಿಸ್‌ ಹೊರಡಿಸಲಾಗಿದೆ. ಅಂತರರಾಜ್ಯ ಅಪರಾಧಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇತರ ರಾಜ್ಯಗಳೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

41 ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಏಳು ಮಂದಿ ಘೋಷಿತ ಅಪರಾಧಿಗಳನ್ನು ಬಂಧಿಸಲಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 6,986 ಚಲನ್‌ಗಳನ್ನು ನೀಡಲಾಗಿದೆ. ಮಹಿಳೆಯರು ಹಾಗೂ ಸೈಬರ್ ಸುರಕ್ಷತೆಯನ್ನು ಗಮನದಲ್ಲಿರಿಸಿ, 81 ಕಡೆ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದೂ ಮಾಹಿತಿ ನೀಡಲಾಗಿದೆ.

ರಾತ್ರಿ ವೇಳೆ ಭದ್ರತೆ ಹೆಚ್ಚಿಸುವ ಸಲುವಾಗಿ 366 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 1,566 ಗಸ್ತು ವಾಹನಗಳು ಮತ್ತು 4,900ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

3,435 ಕರೆ
ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವುದಕ್ಕಾಗಿ ತೆರೆದಿರುವ ಸಹಾಯವಾಣಿ ಸಂಖ್ಯೆ '112'ಗೆ ಕಳೆದ 24 ಗಂಟೆಗಳಲ್ಲಿ 3,435 ಕರೆಗಳು ಬಂದಿವೆ. ಇದರಲ್ಲಿ, 3,057ಕ್ಕೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

88 ಕಡೆ ವರದಿಯಾಗಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ತಕ್ಷಣವೇ ನೆರವಾಗಿರುವ ಪೊಲೀಸರು, 605 ಮಂದಿ ನಿರಾಶ್ರಿತರಿಗೂ ಸಹಾಯ ಹಸ್ತ ಚಾಚಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ ₹3.51 ಲಕ್ಷ ವಂಚಿಸಿದ್ದ 'ಜೈಪುರ ಗ್ಯಾಂಗ್‌'ನ ನಾಲ್ವರನ್ನು ಬಂಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries