HEALTH TIPS

ಕೃತಕ ಬುದ್ಧಿಮತ್ತೆ, ಸೈಬರ್‌ ಅಪರಾಧಗಳು ಕಾನೂನು ವ್ಯವಸ್ಥೆಗೆ ಸವಾಲು: ಸಿಜೆಐ

ಪಣಜಿ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೈಬರ್‌ ಅಪರಾಧಗಳಿಂದ ಎದುರಾಗಿರುವ ಸವಾಲುಗಳನ್ನು ನಿಭಾಯಿಸಲು ದೇಶದಾದ್ಯಂತ ವಕೀಲರಿಗೆ ತರಬೇತಿ ನೀಡಲು ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಅಕಾಡೆಮಿ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶುಕ್ರವಾರ ಪ್ರತಿಪಾದಿಸಿದರು.

ದಕ್ಷಿಣ ಗೋವಾದ ಇಂಡಿಯಾ ಇಂಟರ್‌ನ್ಯಾಷನಲ್‌ ಯುನಿವರ್ಸಿಟಿ ಆಫ್‌ ಲೀಗಲ್‌ ಎಜುಕೇಷನ್‌ ಅಂಡ್‌ ರಿಸರ್ಚ್‌ನಲ್ಲಿ ಭಾರತದ ವಕೀಲರ ಸಂಘ ಆಯೋಜಿಸಿದ್ದ ಮಧ್ಯಸ್ಥಿಕೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

'ಕೃತಕ ಬುದ್ಧಿಮತ್ತೆಯು ಕಾನೂನು ವೇದಿಕೆಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಇದೇ ವೇಳೆ ತಂತ್ರಜ್ಞಾನ ಬಳಸಿಕೊಂಡು ಸೈಬರ್‌ ಅಪರಾಧಿಗಳು ಹೊಸ ಬಗೆಯ ಅಪರಾಧಗಳನ್ನು ಕಂಡುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಕಾನೂನು ವ್ಯವಸ್ಥೆಗೆ ದೊಡ್ಡ ಮತ್ತು ಗಂಭೀರ ಸವಾಲುಗಳು ಎದುರಾಗುತ್ತವೆ ಎಂಬುದನ್ನು ಅಂದಾಜಿಸಬಹುದು' ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವೃತ್ತಿಪರ ತರಬೇತಿ ಅಗತ್ಯ

ಈ ಸವಾಲುಗಳನ್ನು ಮೆಟ್ಟಿನಿಲ್ಲಲು ವಕೀಲರ ಸಂಘದ ಸದಸ್ಯರು ತಮ್ಮನ್ನು ತಾವು ಸಜ್ಜುಗೊಳಿಸಬೇಕಿದೆ. ಅದಕ್ಕಾಗಿ ಸದಸ್ಯರಿಗೆ ಅಗತ್ಯ ವೃತ್ತಿಪರ ತರಬೇತಿಗಳನ್ನು ನೀಡಬೇಕಿದೆ. ಜತೆಗೆ ಈ ಕಾರ್ಯಗಳನ್ನು ನಿರ್ವಹಿಸಲು ರಾಷ್ಟ್ರ ಮಟ್ಟದಲ್ಲಿ ಕಾನೂನು ಅಕಾಡೆಮಿಯ ಅಗತ್ಯವೂ ಇದೆ ಎಂದು ಸಿಜೆಐ ಒತ್ತಿ ಹೇಳಿದರು.

ನ್ಯಾಯಾಲಯಗಳು ವಿಚಾರಣೆ ಸ್ಥಳವಾಗಿ ಅಷ್ಟೇ ಅಲ್ಲದೆ, ವಿವಾದಗಳ ಸಮಗ್ರ ಪರಿಹಾರ ಕೇಂದ್ರವೂ ಆಗಿ ಕಾರ್ಯ ನಿರ್ವಹಿಸಬೇಕು. ಮಧ್ಯಸ್ಥಿಕೆ ಸೇರಿದಂತೆ 'ಬಹು ದ್ವಾರಗಳ' ನ್ಯಾಯಾಲಯ ಪರಿಕಲ್ಪನೆಯತ್ತಲೂ ಹೊರಳಬೇಕಿದೆ ಎಂದು ಸಿಜೆಐ ಪ್ರತಿಪಾದಿಸಿದರು.

ಜಿಲ್ಲಾ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್‌ವರೆಗೆ ಎಲ್ಲ ಹಂತಗಳಲ್ಲೂ ಹೆಚ್ಚಿನ ಸಂಖ್ಯೆಯ ಮಧ್ಯಸ್ಥಿಕೆಯ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಮಧ್ಯಸ್ಥಿಕೆ ದೌರ್ಬಲ್ಯವಲ್ಲ

ನ್ಯಾಯಾಂಗದ ಬಾಕಿ ಪ್ರಕರಣಗಳನ್ನು ಕಡಿಮೆ ಮಾಡುವ 'ಮಧ್ಯಸ್ಥಿಕೆಯು' ಕಾನೂನಿನ ದೌರ್ಬಲ್ಯದ ಸಂಕೇತವಲ್ಲ. ಬದಲಿಗೆ ಅದು ಕಾನೂನಿನ ಅತ್ಯುನ್ನತ ವಿಕಾಸದ ಸಂಕೇತ. ಅದು ತೀರ್ಪು ನೀಡುವ ಸಂಸ್ಕೃತಿಯನ್ನು ಸಾಮರಸ್ಯ ಮೂಡಿಸುವ ಸಂಸ್ಕೃತಿಯನ್ನಾಗಿ ಪರಿವರ್ತಿಸುತ್ತದೆ ಎಂದರು.

ದೇಶದಲ್ಲಿ 39,000 ತರಬೇತಿ ಪಡೆದ ಮಧ್ಯಸ್ಥಿಕೆದಾರರಿದ್ದಾರೆ. ಎಲ್ಲ ಹಂತಗಳಲ್ಲಿ ಮಧ್ಯಸ್ಥಿಕೆಯ ಪರಿಣಾಮಕಾರಿ ಅನುಷ್ಠಾನಕ್ಕೆ ದೇಶದಲ್ಲಿ 2.50 ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಮಧ್ಯಸ್ಥಿಕೆದಾರರ ಅಗತ್ಯವಿದೆ ಎಂದು ಸಿಜೆಐ ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries