ನವದೆಹಲಿ: 'ಮೊಟ್ಟೆಗಳು ಸೇವೆನೆಗೆ ಸುರಕ್ಷಿತ. ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕವಾಗುವ ಯಾವುದೇ ಅಂಶ ಪತ್ತೆಯಾಗಿಲ್ಲ' ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಶನಿವಾರ ಹೇಳಿದೆ.
'ದೇಶದಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳು ಮಾನವನ ಸೇವನೆಗೆ ಸುರಕ್ಷಿತವಾಗಿವೆ.
ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಆರೋಪಿಸುವ ವರದಿಗಳು ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಈ ವದಂತಿಗಳು ಜನರನ್ನು ತಪ್ಪುದಾರಿಗೆ ಎಳೆಯುವುದಲ್ಲದೆ, ಆತಂಕವನ್ನು ಸೃಷ್ಟಿ ಮಾಡಿವೆ' ಎಂದು ಎಫ್‌ಎಸ್‌ಎಸ್‌ಎಐ ಪ್ರಕಟಣೆ ತಿಳಿಸಿದೆ.
'ಮೊಟ್ಟೆಗಳಲ್ಲಿ 'ನೈಟ್ರೊಫ್ಯೂರಾನ್' ಅಂಶ ಪತ್ತೆಯಾಗಿದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಹರಿದಾಡಿದ್ದವು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಎಫ್‌ಎಸ್‌ಎಸ್‌ಎಐ, 'ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಕಾರ, ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಉತ್ಪಾದನೆಯ ಎಲ್ಲ ಹಂತದಲ್ಲಿ ನೈಟ್ರೋಫ್ಯೂರಾನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ' ಎಂದು ತಿಳಿಸಿದೆ.
'ಯಾವುದೇ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಮೊಟ್ಟೆ ಸೇವನೆಯು ಕ್ಯಾನ್ಸರ್‌ಗೆ ಕಾರಣ ವಾಗುತ್ತದೆ ಎಂಬುದಾಗಿ ಹೇಳಿಲ್ಲ' ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
'ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದ ಭಾರತದಲ್ಲಿನ ನಿಯಮಾವಳಿಗಳು ಅಂತರರಾಷ್ಟ್ರೀಯ ಕಾನೂನುಗಳಿಗೆ ಪೂರಕವಾಗಿವೆ. ಯುರೋಪ್ ಒಕ್ಕೂಟ ಮತ್ತು ಅಮೆರಿಕವು ಆಹಾರಕ್ಕೆ ಬಳಕೆಯಾಗುವ ಪ್ರಾಣಿ-ಪಕ್ಷಿಗಳಲ್ಲಿ ನೈಟ್ರೊಫ್ಯೂರಾನ್ ಬಳಕೆಯನ್ನು ನಿಷೇಧಿಸಿವೆ' ಎಂದು ತಿಳಿಸಿದೆ. ನಿರ್ದಿಷ್ಟ ಬ್ರ್ಯಾಂಡ್‌ಗೆ ಸಂಬಂಧಿಸಿದ ಮೊಟ್ಟೆಗಳ ಪರೀಕ್ಷಾ ವರದಿಯಿಂದ ಉಂಟಾಗಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ
ಎಫ್‌ಎಸ್‌ಎಸ್‌ಎಐ, 'ಸ್ವಚ್ಛತೆ ಮತ್ತು ಆಹಾರಕ್ಕೆ ಸಂಬಂಧಿಸಿದ ವ್ಯತ್ಯಾಸದಿಂದ ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಈ ಒಂದು ಪ್ರಕರಣದಿಂದ ದೇಶದ ಒಟ್ಟು ಮೊಟ್ಟೆ ಉತ್ಪಾದನೆಯ ಗುಣಮಟ್ಟವನ್ನು ನಿರ್ಧರಿಸಲಾಗುವುದಿಲ್ಲ' ಎಂದು ತಿಳಿಸಿದೆ.
ನೈಟ್ರೊಫ್ಯೂರಾನ್ ಮತ್ತು ಕ್ಯಾನ್ಸರ್‌ಗೆ ಸಂಬಂಧವಿಲ್ಲ ಮತ್ತು ಅದು ಮನುಷ್ಯರ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುವುದಕ್ಕೆ ಪೂರಕವಾದ ವೈಜ್ಞಾನಿಕ ದಾಖಲೆಗಳನ್ನು ಉಲ್ಲೇಖಿಸಿ
ಎಫ್‌ಎಸ್‌ಎಸ್‌ಎಐ ಸ್ಪಷ್ಟನೆ ನೀಡಿದೆ.
'ಒಂದು ಪ್ರಯೋಗಾಲಯದ ವರದಿಯ ಆಧಾರದಲ್ಲಿ ಮೊಟ್ಟೆ ಅಸುರಕ್ಷಿತ ಎಂದು ಹೇಳುವುದು ವೈಜ್ಞಾನಿಕವಾಗಿ ಸರಿಯಲ್ಲ' ಎಂದು ಹೇಳಿದೆ.
ಆಹಾರ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಉತ್ಪಾದನೆಯಾದ ಮೊಟ್ಟೆಯು ಪೋಷಕಾಂಶಯುಕ್ತವಾಗಿ ಇರುತ್ತದೆ. ಗ್ರಾಹಕರು ಪ್ರಮಾಣೀಕೃತ ವೈಜ್ಞಾನಿಕ ಪುರಾವೆಗಳು ಮತ್ತು ಅಧಿಕೃತ ಮಾರ್ಗಸೂಚಿಗಳನ್ನು ಮಾತ್ರ ಪರಿಗಣಿಸಬೇಕು ಎಂದು ಎಫ್‌ಎಸ್‌ಎಸ್ ಎಐ ಮನವಿ ಮಾಡಿದೆ.

