ಕಾಸರಗೋಡು: ಹಾಡಹಗಲೇ ಕಾಸರಗೋಡು ನಗರದಿಂದ ಯುವಕನನ್ನು ಅಪಹರಿಸಿದ ಕೊಟೇಷನ್ ತಂಡದ ಮತ್ತೆ ನಾಲ್ಕು ಮಂದಿಯನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಮೇಲ್ಪರಂಬ ನಿವಾಸಿ ಹನೀಫಾ ಕೊಟೇಶನ್ ತಂಡದ ಪ್ರಮುಖ ಸೂತ್ರಧಾರನಾಗಿದ್ದಾನೆ. ಪಾಲಕುನ್ನು ಕೋಟಪ್ಪಾರ ನಿವಾಸಿ ಎಂ.ಶರೀಫ್, ಚೆರ್ಕಳ ಬೇವಿಂಜದ ಬಿ.ನೂರುದ್ದೀನ್ ಹಾಗೂ ಚಟ್ಟಂಚಾಲ್ ಸನಿಹದ ಬೆಂಡಿಚ್ಚಾಲ್ ನಿವಾಸಿ ಕೆ. ವಿಜಯನ್ ಬಂಧಿತರು.
ಕಾಸರಗೋಡು ನಗರದ ಕರಂದಕ್ಕಾಡು ಬಳಿಯ ಹೋಟೆಲ್ ಎದುರು ನಿಂತಿದ್ದ ಮೇಲ್ಪರಂಬ ನಿವಾಸಿ ಹನೀಫ್ ಎಂಬವರನ್ನು ಆಂಧ್ರಪ್ರದೇಶ ನೋಂದಾಯಿತ ಕಾರಿನಲ್ಲಿ ಬುಧವಾರ ಹಾಡಹಗಲು ಅಪಹರಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಸಿದಾನ ಓಂಕಾರ್, ಎ.ಶ್ರೀನಾಥ್, ಮಾರುತಿ ಪ್ರಸಾದ್ ಹಾಗೂ ಪೃಥ್ವೀರಾಜ್ ರೆಡ್ಡಿ ಎಂಬವರನ್ನು ಈ ಹಿಂದೆ ಬಂಧಿಸಲಾಗಿದೆ.
ಕಾಸರಗೋಡು ಕೇಂದ್ರೀಕರಿಸಿ ಅಮಾನ್ಯ ನೋಟುಗಳ ವ್ಯವಹಾರ ನಡೆಸುತ್ತಿದ್ದ ತಂಡದ ಸದಸ್ಯನೊಬ್ಬನಿಂದ ಲಕ್ಷಾಂತರ ರೂ. ಮೊತ್ತದ ಅಸಲಿ ಹಣ ದೋಚಿರುವುದು ಅಪಹರಣಕ್ಕೆ ಕಾರಣವೆಂದುಮೇಲ್ನೋಟಕ್ಕೆ ಸಾಬೀತಾಗಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

