ಕಾಸರಗೋಡು: ಸಾಮಾಜಿಕ ಜಾಲ ತಾಣದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗಪಡಿಸುವ ರೀತಿಯ ಸಂದೇಶ ರವಾನಿಸಿದ ಚೆರ್ವತ್ತೂರಿನ ಮಹಿಳಾ ಲೀಗ್ ನೇತಾರೆ ಮಡಕ್ಕರ ಮಳಕ್ಕೀಲ್ ನಿವಾಸಿ ನಫೀಸಾ ಎಂಬವರ ವಿರುದ್ಧ ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನಫೀಸಾ ಚೆರ್ವತ್ತೂರು ಗ್ರಾಮ ಪಂಚಾಯಿತಿಯ ಎರಡನೇ ವಾರ್ಡು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮತ ಎಣಿಕೆ ನಡೆದ ಡಿ. 13ರಂದು ಚೆರ್ವತ್ತೂರು ಮಡಕ್ಕರದಲ್ಲಿ ಮುಸ್ಲಿಂಲೀಗ್ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ತುರುತ್ತಿಯ ಮಸೀದಿಗೆ ಹಾನಿಯೆಸಗಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಫೀಸಾ ಸುಳ್ಳು ಸುದ್ದಿ ಪ್ರಚಾರಪಡಿಸಿರುವ ಬಗ್ಗೆ ಈಕೆ ವಿರುದ್ಧ ಕೇಸು ದಾಖಲಿಸಲಾಗಿದೆ.

