HEALTH TIPS

ಆಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

ನವದೆಹಲಿ: 'ಅನೇಕ ರೋಗಗಳ ವಿರುದ್ಧ ಆಯಂಟಿಬಯೋಟಿಕ್ಸ್‌ (ಪ್ರತಿಜೀವಕ)ಗಳ ಬಳಕೆಯೂ ನಿಷ್ಪ್ರಯೋಜಕವಾಗಿದೆ ಎಂದು ಹಲವು ಸಂಶೋಧನೆಗಳಲ್ಲಿ ಕಂಡುಬಂದಿರುವುದು ಕಳವಳ ಮೂಡಿಸಿದ್ದು, ಅದರ ಬಳಕೆ ಕುರಿತಂತೆ ಜನರು ಎಚ್ಚರ ವಹಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

2025ನೇ ವರ್ಷದ ಕೊನೆಯ 'ಮನದ ಮಾತು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಆಯಂಟಿಬಯೋಟಿಕ್ಸ್‌ ಎಂಬುದು ಔಷಧಿಯಲ್ಲ. ವೈದ್ಯರ ಸೂಚನೆಯಂತೆ ಮಾತ್ರ ಬಳಸಬೇಕು' ಎಂದು ಅವರು ಸಲಹೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಇತ್ತೀಚಿಗಿನ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ನ್ಯುಮೋನಿಯಾ, ಮೂತ್ರ ನಾಳದ ಸೋಂಕು ಸೇರಿದಂತೆ ಹಲವು ಕಾಯಿಲೆಗಳಿಗೆ ಆಯಂಟಿಬಯೋಟಿಕ್ಸ್‌ ನಿಷ್ಪರಿಣಾಮಕಾರಿಯಾಗಿದೆ. ಹೀಗಾಗಿ, ಇವುಗಳ ಬಳಕೆಯನ್ನು ಜನರೂ ಕೂಡ ನಿಯಂತ್ರಿಸಬೇಕು. ಈ ವಿಚಾರವೂ ಎಲ್ಲರೂ ಕಳವಳ ಪಡುವ ವಿಚಾರವಾಗಿದೆ' ಎಂದು ಹೇಳಿದ್ದಾರೆ.

'ಒಂದು ಮಾತ್ರೆ ತೆಗೆದುಕೊಂಡ ತಕ್ಷಣ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಜನರು ನಂಬಿದ್ದಾರೆ. ಆಯಂಟಿಬಯೋಟಿಕ್‌ಗಳು ಕಾಯಿಲೆ ಹಾಗೂ ಸೋಂಕುಗಳನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದು ಸಂಶೋಧನೆಯಿಂದಲೂ ಸಾಬೀತಾಗಿದೆ. ನಿಮ್ಮ ಸ್ವಂತ ವಿವೇಚನೆಯಿಂದ ಔಷಧಗಳನ್ನು ಬಳಸಬೇಕು ಎಂದು ಜನರಿಗೆ ಸಲಹೆ ನೀಡುತ್ತೇನೆ' ಎಂದು ವಿವರಿಸಿದ್ದಾರೆ.

'ಆಯಂಟಿ ಬಯೋಟಿಕ್ಸ್‌ ಬಳಕೆಯ ವಿಚಾರದಲ್ಲಿ ನಿಮಗೊಂದು ಸಲಹೆ ನೀಡುತ್ತೇನೆ. ಔಷಧ ಬಳಕೆಗೆ ಮಾರ್ಗದರ್ಶನದ ಅಗತ್ಯವಿದ್ದು, ಆಯಂಟಿಬಯೋಟಿಕ್ಸ್‌ ಬಳಕೆಗೆ ವೈದ್ಯರ ಸಲಹೆ ಅಗತ್ಯಬೇಕು. ಇದನ್ನು ಅಭ್ಯಾಸ ಮಾಡಿಕೊಂಡರೆ, ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯವಾಗಲಿದೆ' ಎಂದು ಮೋದಿ ತಿಳಿಸಿದ್ದಾರೆ.

ದುಬೈನಲ್ಲಿ ಕನ್ನಡ ಭಾಷಾ ಬೆಳವಣಿಗೆಯ ಕುರಿತಂತೆ ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. 'ದುಬೈನಲ್ಲಿ ನೆಲಸಿರುವ ಕನ್ನಡದ ಕುಟುಂಬಗಳು ತಮಗೆ ಒಂದು ಪ್ರಶ್ನೆ ಕೇಳಿಕೊಂಡರು. ನಮ್ಮ ಮಕ್ಕಳು ತಂತ್ರಜ್ಞಾನ ಲೋಕದಲ್ಲಿ ಬಹಳಷ್ಟು ಮುಂದುವರಿದಿದ್ದಾರೆ. ಆದರೆ ಭಾಷೆಯಿಂದ ದೂರ ಸರಿಯುತ್ತಿದ್ದಾರೆ ಎಂಬುದು ಅವರನ್ನು ಕಾಡತೊಡಗಿತ್ತು. ಇದಕ್ಕೆ ಉತ್ತರವಾಗಿ 'ಕನ್ನಡ ಪಾಠಶಾಲೆಯೂ ಆರಂಭಗೊಂಡಿತು. ಇದರ ಅಡಿಯಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸಿ ಬರೆಯುವ ಜೊತೆಗೆ ಮಾತನಾಡುವುದನ್ನು ಕಲಿಸಿಕೊಡಲಾಯಿತು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಇದರಡಿಯಲ್ಲಿ ಸೇರಿಕೊಂಡಿದ್ದಾರೆ. ನಿಜವಾಗಿಯೂ ಕನ್ನಡ ನಾಡು ನುಡಿಯೂ ಹೆಮ್ಮೆಯಾಗಿದೆ' ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಫಿಜಿಯ ಉಲ್ಲೇಖ:

ದೇಶದಿಂದ ಸಾವಿರಾರು ಕಿಲೋ ಮೀಟರ್‌ ದೂರದಲ್ಲಿರುವ ಫಿಜಿ ದೇಶದಲ್ಲಿ ಕೂಡ ಭಾರತೀಯ ಭಾಷೆಯನ್ನು ಪಸರಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ನಿರಂತರ ಪ್ರಯತ್ನದಿಂದ ಹೊಸ ತಲೆಮಾರಿನ ಮಕ್ಕಳು ಕೂಡ ತಮಿಳು ಕಲಿತಿದ್ದಾರೆ. ಫಿಜಿ ದೇಶದ ರಕಿ-ರಕಿ ಪಟ್ಟಣದಲ್ಲಿ ಶಾಲೆಯಲ್ಲಿ ಮೊದಲ ಬಾರಿಗೆ ತಮಿಳು ದಿನ ಆಚರಿಸಲಾಯಿತು. ಇದರಿಂದ ಮಕ್ಕಳು ಸ್ವಯಂಪ್ರೇರಿತವಾಗಿ ತಮ್ಮ ಭಾಷೆಯಲ್ಲಿ ಭಾಷಣ ಮಾಡುವ ಜೊತೆಗೆ ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಿದರು' ಎಂದು ಉಲ್ಲೇಖಿಸಿದ್ದಾರೆ.

ಮಣಿಪುರ ಸಾಧನೆ ಉಲ್ಲೇಖ:

ಮಣಿಪುರದ ಕುಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು 40 ವರ್ಷದ ಶ್ರೀರಾಮ್‌ ಮೊಯಿರಾಂಗ್‌ಥೆಮ್‌ ಶ್ರಮವನ್ನು ಇದೇ ವೇಳೆ ಪ್ರಶಂಸಿದ್ದಾರೆ. 'ಸೌರಶಕ್ತಿ ಬಳಸಿಕೊಂಡು ಅತ್ಯಂತ ಗ್ರಾಮೀಣ ಭಾಗದ ನೂರಾರು ಮನೆಗಳಿಗೂ ವಿದ್ಯುತ್‌ ಸಂಪರ್ಕ ಸಿಗುವಂತೆ ಮಾಡಿದ್ದಾರೆ. ಎಲ್ಲಿ ಮನಸ್ಸು ಇರುತ್ತದೆಯೋ ಅಲ್ಲಿ ಮಾರ್ಗವಿರುತ್ತದೆ ಎಂಬುದನ್ನು ನಿರೂಪಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

ಉಲ್ಲೇಖವಾದ ಪ್ರಮುಖ ವಿಚಾರಗಳು‌

  • ದೇಶದ ಭದ್ರತೆ ಕ್ರೀಡೆ ವೈಜ್ಞಾನಿಕ ಸಂಶೋಧನೆಯಲ್ಲಿ 2025 ಭಾರತದ ಪಾಲಿಗೆ ಮಹತ್ತರ ಮೈಲಿಗಲ್ಲಿನ ವರ್ಷ

  • 'ಆಪರೇಷನ್‌ ಸಿಂಧೂರ' ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತ

  • ಟಿ-20 ವಿಶ್ವಕಪ್‌ನಲ್ಲಿ ಅಂಧ ಮಹಿಳಾ ಕ್ರಿಕೆಟ್‌ ತಂಡದಿಂದ ಇತಿಹಾಸ ನಿರ್ಮಾಣ

  • ಬಾಹ್ಯಾಕಾಶ ನಿಲ್ದಾಣಕ್ಕೆ ಶುಭಾಂಶು ಶುಕ್ಲಾ ಕಾಲಿಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶವು ದೈತ್ಯ ಜಿಗಿತ ಸಾಧಿಸಿತು

  • 2025ರಲ್ಲಿ ಚೀತಾಗಳ ಸಂಖ್ಯೆ 30ಕ್ಕೆ ಏರಿಕೆ

  • ಪ್ರಯಾಗ್‌ರಾಜ್‌ನ ಕುಂಭಮೇಳ ಇಡೀ ಜಗತ್ತನ್ನು ಅಚ್ಚರಿಗೊಳಿಸಿತು.

  • ಅಯೋಧ್ಯೆಯಲ್ಲಿ ಧ್ವಜಾರೋಹಣವು ಪ್ರತಿ ಭಾರತೀಯ ಹೆಮ್ಮೆ ಪಡುವ ವಿಚಾರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries