ಮಂಜೇಶ್ವರ: ಅಂತರಂಗದ ಭಾವಗಳು ಕುಗ್ಗಿ ಹೈರಾಣರಾದಾಗ, ಮನಸ್ಸನ್ನು ಪುಟಿದೇಳಿಸುವ, ಅಂತರ್ಭಾವಕ್ಕೆ ಶಕ್ತಿ ನೀಡುವ ಶಕ್ತಿ ಕವಿತೆಗಳಿಗಿದೆ. ಆತ್ಮಾವಲೋಕನ, ಪರಿಸರ ಪ್ರಜ್ಞೆ ಹಾಗೂ ಸಾಮುದಾಯಿಕ ಭಾವಗಳನ್ನು ಪರಸ್ಪರ ಬೆಸೆಯಲು ಕಾವ್ಯಗಳು ಬೆಳಕಾಗುತ್ತದೆ ಎಂದು ಶಿಕ್ಷಕಿ, ಕವಯಿತ್ರಿ ಸುಶೀಲಾ ಪದ್ಯಾಣ ಅಭಿಪ್ರಾಯ ವ್ಯಕ್ತಪಡಿಸಿದರು.
ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ವತಿಯಿಂದ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಗುರುವಾರ ಜರಗಿದ 'ಕಥಾ ದೀಪ್ತಿ' ಸಂಪಾದಿತ ಕಥೆಗಳು ಕೃತಿ ಬಿಡುಗಡೆ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಚಿಸಲಾದ ಎಲ್ಲಾ ಕವಿತೆಗಳು ವಿಭಿನ್ನ ಭಾವಗಳೊಂದಿಗೆ ವಿಶಿಷ್ಟವೆನಿಸಿವೆ. ಚಿಂತನೆಗೆ ಹಚ್ಚುವ ಕವನ ಸಾಲುಗಳು ಬಹುಕಾಲ ಹೃದಯದಲ್ಲಿ ಪಡಿಯಚ್ಚು ಮೂಡಿಸಿ ಕವಿ ಹಾಗೂ ಕವಿತೆಯನ್ನು ಅಜರಾಮರಗೊಳಿಸುತ್ತದೆ. ಎಲ್ಲ ಭಾವಗಳೂ ಒಂದಾಗಿ ಸಮಷ್ಠಿಯ ಮಾನವೀಯತೆಯ ಹೃದಯ ಅರಳಿಸುವ ಕೆಲಸ ಕಾವ್ಯದಿಂದಾಗುವುದೆಂದು ಅವರು ಈ ಸಂದರ್ಭ ವಿಶ್ಲೇಷಿಸಿದರು.
ದಿನೇಶ್ ಕುಂದರ್ ಬಿಳೆನೆಲೆ, ಅನುರಾಧಾ ರಾಜೀವ್ ಸುರತ್ಕಲ್, ಆನಂದ ರೈ ಅಡ್ಕಸ್ಥಳ, ಜ್ಯೋಸ್ನ್ಸಾ ಕಡಂದೇಲು, ವಿಜಯ ಕಾನ, ರಮ್ಯಾ ಕೊಕ್ಕಡ, ಪವಿತ್ರಾ ದಿನೇಶ್ ಕೊಕ್ಕಡ, ದಿಯಾ ಉದಯ್ ಡಿ.ಯು., ರಾಧಿಕಾ ಕಾಮತ್, ವೆಂಕಟ್ ಭಟ್ ಎಡನೀರು, ಶಶಿಕಲಾ ಕುಂಬಳೆ, ಪ್ರಮೀಳಾ ಚುಳ್ಳಿಕ್ಕಾನ, ಜನಾರ್ದನ ನಾಯ್ಕ ಬೊಟ್ಟಾರಿ, ಚಿತ್ರಕಲಾ ದೇವರಾಜ್ ಸೂರಂಬೈಲು, ಶಂಕರ ಪಡಂಗ ಕಿಲ್ಪಾಡಿ, ಪ್ರೇಮಾ ಆರ್.ಶೆಟ್ಟಿ, ಮುಲ್ಕಿ, ಸವಿತಾ ರಾಮಕುಂಜ, ದೇವರಾಜ ಆಚಾರ್ಯ ಸೂರಂಬೈಲು, ನಿರ್ಮಲಾ ಶೇಷಪ್ಪ ಖಂಡಿಗೆ, ರಿತೇಶ್ ಕಿರಣ್ ಕಾಟುಕುಕ್ಕೆ, ಪುರುಷೋತ್ತಮ ಭಟ್.ಕೆ.ಪೈವಳಿಕೆ ಅವರು ಸ್ವರಚಿತ ಕವನಗಳನ್ನು ವಾಚಿಸಿದರು. ಸವಿಹೃದಯದ ಕವಿಮಿತ್ರರು ವೇದಿಕೆಯ ನಿರ್ದೇಶಕ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಂಚಾಲಕ ಸುಭಾಷ್ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು. ದಿವ್ಯಾ ಗಟ್ಟಿ ಪರಕ್ಕಿಲ ಮತ್ತು ಪವಿತ್ರಾ ದಿನೇಶ್ ಕೊಕ್ಕಡ ನಿರೂಪಿಸಿದರು. ದೇವರಾಜ್ ಸೂರಂಬೈಲು ವಂದಿಸಿದರು.

.jpg)
.jpg)
