ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಲ್ ಹಾಗೂ ಮನಮೋಹನ ಅವರನ್ನು ಒಳಗೊಂಡ ನ್ಯಾಯಪೀಠ, ಸಂವಿಧಾನದ 142ನೇ ವಿಧಿಯನ್ವಯ ತನ್ನ ಅಧಿಕಾರವನ್ನು ಬಳಸಿಕೊಂಡು ಈ ಜೋಡಿಗೆ ವಿಚ್ಛೇದನ ನೀಡಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಹಾಗೂ ಪರಸ್ಪರರ ವಿರುದ್ಧ ಮತ್ತಷ್ಟು ಪ್ರಕರಣಗಳನ್ನು ದಾಖಲಿಸದಂತೆ ತಡೆ ವಿಧಿಸಿದೆ.
"ಪತಿ-ಪತ್ನಿ ಕೇವಲ 65 ದಿನಗಳ ವೈವಾಹಿಕ ಜೀವನ ನಡೆಸಿದ್ದರೂ, ದಾವೆಗಳು ತಮ್ಮ ಪರವಾಗಿ ಇತ್ಯರ್ಥವಾಗಬೇಕು ಎಂಬ ಕಾರಣಕ್ಕೆ 13 ವರ್ಷಗಳ ಕಾಲ ಪರಸ್ಪರರ ವಿರುದ್ಧ 40 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಬ್ಬರೂ ವೆಚ್ಚ ಭರಿಸುವ ಜತೆಗೆ ಶಿಕ್ಷೆಗೆ ಅರ್ಹರಾಗಿದ್ದಾರೆ. ಆದ್ದರಿಂದ ಇಬ್ಬರಿಗೂ ತಲಾ 10 ಸಾವಿರ ರೂಪಾಯಿ ಸಾಂಕೇತಿಕ ದಂಡ ವಿಧಿಸಲಾಗುತ್ತಿದೆ. ಈ ಮೊತ್ತವನ್ನು ಸುಪ್ರೀಂಕೋರ್ಟ್ ವಕೀಲರ ಸಂಘಕ್ಕೆ ಠೇವಣಿ ಮಾಡಬೇಕು," ಎಂದು ನ್ಯಾಯಪೀಠ ಸೂಚಿಸಿದೆ.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಸಂಬಂಧಿತ ವ್ಯಾಜ್ಯಗಳು ಹಲವು ಪಟ್ಟು ಹೆಚ್ಚುತ್ತಿರುವುದನ್ನು ಗಮನಿಸಿದ ನ್ಯಾಯಪೀಠ, ಪ್ರಕರಣಗಳು ನ್ಯಾಯಾಲಯದ ಕಟಕಟೆಗೆ ತಲುಪುವ ಮುನ್ನವೇ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

