ನವದೆಹಲಿ: 'ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂಬ ಹೇಳಿಕೆ ಮೂಲಕ ಚೀನಾ, ಭಾರತದ ರಾಷ್ಟ್ರೀಯ ಭದ್ರತೆಯನ್ನು ಗೇಲಿ ಮಾಡಿದೆ. ಈ ವಿಷಯದಲ್ಲಿ ಪ್ರಧಾನಿ ಮೌನ ಮುರಿಯಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಚೀನಾದ ಹೇಳಿಕೆಯ ಬಗ್ಗೆ ದೇಶದ ಜನರು ಸ್ಪಷ್ಟತೆ ಬಯಸುತ್ತಿದ್ದಾರೆ.
ಈ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಬೇಕು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.
'ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ 65ಕ್ಕೂ ಹೆಚ್ಚು ಬಾರಿ ಭಾರತ ಮತ್ತು ಪಾಕ್ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ತಾವೇ ಎಂದು ಹೇಳಿಕೊಂಡಿದ್ದಾರೆ. ಆದರೆ, ಪ್ರಧಾನಿ ಈವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ, ಬದಲಿಗೆ ಟ್ರಂಪ್ ತಮ್ಮ ಆತ್ಮೀಯ ಸ್ನೇಹಿತ ಎಂದು ಹೇಳುವುದನ್ನು ಮುಂದುವರಿಸಿದ್ದಾರೆ. ಈಗ ಚೀನಾದ ಸರದಿ' ಎಂದು ಜೈರಾಂ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಭಾರತ-ಪಾಕ್ ಕದನ ವಿರಾಮ ಘೋಷಣೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಮಂಗಳವಾರ ಹೇಳಿದ್ದರು. ಆದರೆ, ಭಾರತದ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಅವರು, 2025ರ ಜುಲೈ 4ರಂದು ಸಾರ್ವಜನಿಕವಾಗಿ, 'ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತವು ವಾಸ್ತವವಾಗಿ ಚೀನಾದ ವಿರುದ್ಧ ಹೋರಾಡಬೇಕಾಯಿತು ಎಂದು ಹೇಳಿದ್ದರು. ಇದು ಚೀನಾವು ಪಾಕಿಸ್ತಾನದೊಂದಿಗೆ ನಿರ್ಣಾಯಕ ಹೊಂದಾಣಿಕೆ ಮಾಡಿಕೊಂಡಿದ್ದನ್ನು ಸೂಚಿಸಿತ್ತು. ಈಗ ಚೀನಾವು ಮಧ್ಯಸ್ಥಿಕೆ ಮಂತ್ರದೊಂದಿಗೆ ಮುಂದೆ ಬಂದಿರುವುದು, ಭಾರತ- ಚೀನಾ ನಡುವಿನ ಏರುಪೇರಾದ ಸಂಬಂಧದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಭಾರತದ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ' ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ನೇರ ಮಾತುಕತೆ:
ಪಾಕಿಸ್ತಾನದ ಜತೆಗೆ ಮೇ 7ರಿಂದ 10ರವರೆಗೆ ನಡೆದ ಸೇನಾ ಸಂಘರ್ಷವನ್ನು ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ (ಡಿಜಿಎಂಒಎಸ್) ನಡುವಿನ ನೇರ ಮಾತುಕತೆಯ ಮೂಲಕ ಇತ್ಯರ್ಥಪಡಿಸಲಾಯಿತು ಎಂದು ಭಾರತ ಹೇಳಿದೆ. ಭಾರತ-ಪಾಕಿಸ್ತಾನದ ವಿಷಯದಲ್ಲಿ ಮೂರನೆಯ ವ್ಯಕ್ತಿ, ದೇಶಕ್ಕೆ ಅವಕಾಶ ಇಲ್ಲ ಎನ್ನುವುದನ್ನೂ ಈಗಾಗಲೇ ಸ್ಪಷ್ಟಪಡಿಸಿದೆ.
'ಭಾರತವು ಚೀನಾದೊಂದಿಗೆ ಸಂಬಂಧ ಮರುಸ್ಥಾಪನೆಗೆ ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲೇ ಚೀನಾದಿಂದ ಈ ರೀತಿಯ ಪ್ರತಿಕ್ರಿಯೆ ಬಂದಿರುವುದು ಕಳವಳಕಾರಿ. ಪ್ರಧಾನಿ ನರೇಂದ್ರ ಮೋದಿ ಅವರು 2020ರ ಜೂನ್ 19ರಂದೇ ಚೀನಾಕ್ಕೆ 'ಕ್ಲೀನ್ ಚಿಟ್' ನೀಡಿದ್ದಾರೆ. ಇದು ಮಾತುಕತೆ ವಿಷಯದಲ್ಲಿ ಭಾರತದ ಸ್ಥಾನ ದುರ್ಬಲಗೊಂಡಿರುವುದನ್ನು ಸೂಚಿಸುತ್ತದೆ. ಅರುಣಾಚಲ ಪ್ರದೇಶದ ವಿಷಯದಲ್ಲೂ ಚೀನಾದ ಪ್ರಚೋದನಕಾರಿ ನೀತಿಗೆ ತಡೆ ಬಿದ್ದಿಲ್ಲ. ಇಂತಹ ಸಂದರ್ಭದಲ್ಲಿ ಚೀನಾ ಹೇಳಿಕೆ ಬಗ್ಗೆ ದೇಶದ ಜನರು ಪ್ರಧಾನಿಯಿಂದ ಸಷ್ಟತೆ ಬಯಸುತ್ತಿದ್ದಾರೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ. 'ಸಷ್ಟತೆ ಬಯಸುತ್ತಿದ್ದಾರೆ'.

