HEALTH TIPS

ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ

ವರ್ಕಲ: ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು. 

'ಅಲ್ಲದೇ, ನೈತಿಕತೆ ಇಲ್ಲದ ಹಾಗೂ ಅಹಂಕಾರದ ಭಾಷೆಯಲ್ಲಿ ಕೋಮುವಾದ ಹಬ್ಬಿಸುತ್ತಿರುವುದರ ಬಗ್ಗೆಯೂ ಅವರು ಎಚ್ಚರಿಸಿದ್ದರು' ಎಂದೂ ಹೇಳಿದರು.

ತಿರುವನಂತಪುರ ಜಿಲ್ಲೆಯ ವರ್ಕಳದಲ್ಲಿ ಹಮ್ಮಿಕೊಂಡಿದ್ದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

'ನಾರಾಯಣ ಗುರುಗಳು ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆಯು ಚಳವಳಿ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು' ಎಂದರು.

'ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ, ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ' ಎಂದರು.‌

'ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ' ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು' ಎಂದು ಹೇಳಿದರು.

'ನಾರಾಯಣ ಗುರುಗಳ ಪ್ರಭಾವ ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 1925ರಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಅವರು ನಡೆಸಿದ ಐತಿಹಾಸಿಕ ಸಂವಾದವು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. ಜಾತಿ ಎನ್ನುವುದು ಸಾಂಸ್ಕೃತಿಕ ವೈವಿಧ್ಯತೆಯಲ್ಲ, ಅದು ಸಾಂಸ್ಥಿಕ ಅನ್ಯಾಯ ಎಂಬ ಮೂಲಭೂತ ಸತ್ಯವನ್ನು ಗಾಂಧೀಜಿಯವರು ಅರಿತುಕೊಳ್ಳುವಂತೆ ಮಾಡಿತು' ಎಂದು ವಿವರಿಸಿದರು.

ತಿರುವನಂತಪುರ ಜಿಲ್ಲೆಯ ವರ್ಕಳದಲ್ಲಿ ಬುಧವಾರ ನಡೆದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜಾ ವಿಧಿಗಳಲ್ಲಿ ಪಾಲ್ಗೊಂಡರು

ಸಿದ್ದರಾಮಯ್ಯ ಭಾಷಣದ ಪ್ರಮುಖ ಅಂಶಗಳು

  • ರವೀಂದ್ರನಾಥ ಟ್ಯಾಗೋರ್ ಪ್ರತಿಪಾದಿಸಿದ 'ವಿಶ್ವ ಮಾನವ' ಪರಿಕಲ್ಪನೆಗೆ ನಾರಾಯಣ ಗುರುಗಳ ಚಿಂತನೆಗಳೇ ಸ್ಫೂರ್ತಿ

  • ಕೇರಳದಲ್ಲಿ ನೆಲಸಿದ್ದರೂ ನಾರಾಯಣ ಗುರುಗಳ ಪ್ರಭಾವವು ಭಾಷೆ ಮತ್ತು ರಾಜ್ಯದ ಗಡಿಗಳನ್ನು ಮೀರಿ ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಮತ್ತು ಮಲೆನಾಡು ಭಾಗಗಳಲ್ಲಿ ಸುಧಾರಣಾ ಚಳವಳಿಗಳನ್ನು ರೂಪಿಸಿತು.

  • ಕರ್ನಾಟಕ ಕರಾವಳಿಯ ಬಿಲ್ಲವ ಈಡಿಗ ಮೊಗವೀರ ಮತ್ತು ಇತರ ಹಿಂದುಳಿದ ಸಮುದಾಯಗಳು ನಾರಾಯಣ ಗುರುಗಳ ಸ್ವಾಭಿಮಾನ ಶಿಕ್ಷಣ ಮತ್ತು ಸಂಘಟನೆಯ ಕರೆಯಿಂದ ಸ್ಫೂರ್ತಿ ಪಡೆದವು. ಇದು ಈ ಪ್ರದೇಶದಲ್ಲಿ ಕೋಮು ಶಕ್ತಿಗಳ ವಿಭಜನೆಯ ಪ್ರಯತ್ನಗಳಿಗೆ ಬಲವಾದ ಪ್ರತಿರೋಧ ಒಡ್ಡಲು ಪ್ರಮುಖ ಕಾರಣವಾಗಿದೆ.

  • ಬಸವಣ್ಣನವರ 'ಕಾಯಕ' ತತ್ವವು ನಾರಾಯಣ ಗುರುಗಳ ಆರ್ಥಿಕ ಸ್ವಾವಲಂಬನೆಯ ಚಿಂತನೆಯಲ್ಲಿ ಪ್ರತಿಧ್ವನಿಸುತ್ತದೆ

'ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಾರಾಯಣ ಗುರುಗಳ ತತ್ವ-ಬೋಧನೆಗಳನ್ನು 'ಹೈಜಾಕ್' ಮಾಡಲು ಯತ್ನಿಸುತ್ತಿವೆ. ಈ ಬಗ್ಗೆ ಎಚ್ಚರಿಕೆ ಅಗತ್ಯ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು. 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು 'ನಾರಾಯಣ ಗುರುಗಳನ್ನು ನಿರ್ದಿಷ್ಟವಾದ ಧರ್ಮ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಯತ್ನಗಳ ಬಗ್ಗೆ ಜನರು ಜಾಗೃತರಾಗಬೇಕು' ಎಂದರು. 'ಆಧುನಿಕ ಕೇರಳ ನಿರ್ಮಾಣದಲ್ಲಿ ನಾರಾಯಣ ಗುರುಗಳ ದೂರದೃಷ್ಟಿ ಹಾಗೂ ಆಧ್ಯಾತ್ಮಿಕತೆ ಪ್ರಭಾವ ಇದೆ' ಎಂದೂ ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries