ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆ ಡಿಸೆಂಬರ್ ತಿಂಗಳಿನಲ್ಲಿ ಶೇ 3.7ರಷ್ಟು ಆಗಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟದ ಏರಿಕೆಯಾಗಿದೆ.
ರಸಗೊಬ್ಬರ ಮತ್ತು ಸಿಮೆಂಟ್ ವಲಯದ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಇದು ಬೆಳವಣಿಗೆ ಏರಿಕೆಗೆ ಕಾರಣ ಎಂದು ಸರ್ಕಾರದ ಅಂಕಿ-ಅಂಶಗಳು ಮಂಗಳವಾರ ತಿಳಿಸಿದೆ.
ನವೆಂಬರ್‌ನಲ್ಲಿ ಬೆಳವಣಿಗೆ ಶೇ 2.1ರಷ್ಟಿತ್ತು.
2024ರ ಡಿಸೆಂಬರ್ ತಿಂಗಳಿನಲ್ಲಿ ಈ ವಲಯಗಳ ಬೆಳವಣಿಗೆ ಶೇ 5.1ರಷ್ಟಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬೆಳವಣಿಗೆ ಇಳಿಕೆ ಆಗಿದೆ.
ಈ ಡಿಸೆಂಬರ್‌ನಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಿಸಿದ ಉತ್ಪನ್ನಗಳು, ಕಲ್ಲಿದ್ದಲು, ಉಕ್ಕು ಮತ್ತು ವಿದ್ಯುತ್ ವಲಯದಲ್ಲಿನ ಉತ್ಪಾದನೆ ಇಳಿಕೆ ಆಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಈ ವಲಯಗಳ ಉತ್ಪಾದನೆಯು ಶೇ 2.6ರಷ್ಟಾಗಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಶೇ 4.5ರಷ್ಟಿತ್ತು.

