ಕಾಸರಗೋಡು: ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ಹೊಳೆ, ತೋಡುಗಳು ನೀರಿಲ್ಲದೆ ಬರಿದಾಗತೊಡಗಿದೆ. ಕಟ್ಟ ಕಟ್ಟಿ ನೀರುಸಂಗ್ರಹಿಸುತ್ತಿರುವ ಪ್ರದೇಶದಲ್ಲಿಮಾತ್ರ ಹೊಳೆ, ತೋಡುಗಳಲ್ಲಿಒಂದಷ್ಟು ನಿರಿನ ಹರಿವು ಕಂಡುಬರುತ್ತಿದ್ದು, ಉಳಿದೆಡೆ ಹೊಳೆ, ತೋಡುಗಳು ನೀರಿಲ್ಲದೆ ಭಣಗುಡುತ್ತಿದೆ. ಬೇಸಿಗೆ ಮಳೆ ಲಬ್ಯವಗದಿದ್ದಲ್ಲಿ, ಕುಡಿಯುವ ನೀರಿನ ಕ್ಷಾಮ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ಎಣ್ಮಕಜೆ ಪಂಚಾಯಿತಿಯ ನಡುಬೈಲು, ಬಣ್ಪುತ್ತಡ್ಕ ಸೇರಿದಂತೆ ಕೆಲವೊಂದು ಉನ್ನತಿ(ಕಾಲನಿ)ಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಕಾರ್ಮಿಕರಿಗೆ ಸಮಯ ನಿಗದಿ:
ಬಿಸಿಲಿನ ಬೇಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳಾದ್ಯಂತ ಬಿಸಿಲಿಗೆ ಮೈಯೊಡ್ಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪ್ರತ್ಯೇಕ ಕೆಲಸದ ಸಮಯ ನಿಗದಿಪಡಿಸಲಾಗಿದೆ. ಬಿಸಿಲಿನಲ್ಲಿಕೆಲಸ ನಿರ್ವಹಿಸುತ್ತಿರುವವರಿಗೆ ಮಧ್ಯಾಹ್ನ 12ರಿಂದ 3ರ ವರೆಗೆ ಕಡ್ಡಾಯವಾಗಿ ವಿಶ್ರಾಂತಿ ಕಲ್ಪಿಸುವಂತೆ ಸೂಚಿಸಲಾಗಿದೆ. ಬಿಸಿಲಿನಲ್ಲಿ ಕೆಲಸ ನಿರ್ವಹಿಸುವವಿಗೆ ಸೂರ್ಯಾಘಾತವುಂಟಾಗುವ ಸಾಧ್ಯತೆ ಮನಗಂಡು ಈ ಕ್ರಮ ಕೈಗೊಳ್ಳಲಾಗಿದ್ದು, ಮೇ 20ರ ವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ವಿವಿಧ ಕಾಲಾವಧಿಯಲ್ಲಿ ಕೆಲಸ ನಿರ್ವಹಿಸಬಹುದಾಗಿದ್ದು, ವಿಶ್ರಾಂತಿ ಸಮಯ ಕಳೆದು ಒಟ್ಟು ಎಂಟು ಗಂಟೆಗಳ ಕಾಲ ಕೆಲಸ ನಿರ್ವಹಿಸುವಮೂಲಕ ಈ ನಿಬಂಧನೆ ಜಾರಿಯಲ್ಲಿರುವುದಾಗಿ ಕಾರ್ಮಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಚಿತ್ರಗಳು: ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿ ವಠಾರದಲ್ಲಿ ಪಕ್ಷಿಗಳಿಗೆ ನೀರುಣಿಸುವ ಯೋಜನೆಯನ್ವಯ ಅಳಡಿಸಿದ್ದ ಮಣ್ಣಿನ ಮಡಕೆಯಲ್ಲಿ ಕಾಗೆಗಳು ಬಿಸಿಲಿನ ಬೇಗೆಯಿಂದ ಪಾರಾಗಲು ಜಳಕದಲ್ಲಿ ನಿರತವಾಗಿರುವುದು.

