ಎ.14ರಂದು ಪ್ರಕಟಗೊಂಡ ಐಎಂಎಫ್‌ನ ವಿಶ್ವ ಆರ್ಥಿಕ ಮುನ್ನೋಟದಲ್ಲಿನ ದತ್ತಾಂಶಗಳ ಪ್ರಕಾರ ಪ್ರಸಕ್ತ ಬೆಲೆಗಳಲ್ಲಿ ಬಾಂಗ್ಲಾದೇಶದ ತಲಾದಾಯ 2,911 ಡಾ. ಮತ್ತು ಭಾರತದ ತಲಾದಾಯ 2,812 ಡಾ.ಆಗಿರಲಿದೆ ಎಂದು ಅಂದಾಜಿಸಲಾಗಿದೆ.
ತಲಾದಾಯವು ಒಂದು ದೇಶದ ಒಟ್ಟು ಜಿಡಿಪಿಯನ್ನು ಅಲ್ಲಿಯ ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಅಳತೆಯಾಗಿದ್ದು, ಇದು ಓರ್ವ ವ್ಯಕ್ತಿಯ ಸರಾಸರಿ ಆರ್ಥಿಕ ಪಾಲನ್ನು ಸೂಚಿಸುತ್ತದೆ.
ಅಭಿವೃದ್ಧಿಶೀಲ ದೇಶಗಳ ತಲಾದಾಯ ಸುಮಾರು 7,500 ಡಾ.ಆಗಿದ್ದರೆ ಜಾಗತಿಕ ಸರಾಸರಿಯು ಸುಮಾರು 15,600 ಡಾ.ಗಳಷ್ಟಿದೆ.
2025ರಲ್ಲಿ ಭಾರತದ ತಲಾದಾಯವು 2,675 ಡಾ.ಗಳಿದ್ದರೆ ಬಾಂಗ್ಲಾದೇಶದ್ದು ಕೊಂಚ ಕಡಿಮೆ,ಅಂದರೆ 2,635 ಡಾ.ಆಗಿತ್ತು. ಆದಾಗ್ಯೂ 2023 ಮತ್ತು 2024ರಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿತ್ತು ಎನ್ನುವುದನ್ನು ದತ್ತಾಂಶಗಳು ತೋರಿಸಿವೆ.
2027ರಲ್ಲಿ ಭಾರತದ ತಲಾದಾಯವು 3,074 ಡಾ.ಗೆ ಹೆಚ್ಚಲಿದ್ದು,ಬಾಂಗ್ಲಾದೇಶವನ್ನು (3,048 ಡಾ.) ಮೀರಿಸಲಿದೆ ಮತ್ತು 2031ರವರೆಗೆ ಭಾರತವೇ ಮುನ್ನಡೆ ಕಾಯ್ದುಕೊಳ್ಳಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ತಲಾದಾಯದಲ್ಲಿ ವ್ಯತ್ಯಾಸವಿದ್ದರೂ ದೇಶದ ಒಟ್ಟು ಆರ್ಥಿಕ ಗಾತ್ರದಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಬಹಳ ಮುಂದಿದೆ. 2026ರಲ್ಲಿ ಭಾರತದ ಒಟ್ಟು ಜಿಡಿಪಿ 4.1 ಲಕ್ಷ ಕೋಟಿ ಡಾ. ಮತ್ತು ಬಾಂಗ್ಲಾದೇಶದ್ದು 510 ಶತಕೋಟಿ ಡಾ.ಇರಲಿದೆ ಎಂದು ಅಂದಾಜಿಸಲಾಗಿದೆ.
ತಲಾದಾಯವು ಕೇವಲ ಜನಸಂಖ್ಯೆಯ ಅನುಪಾತವನ್ನು ಅವಲಂಬಿಸಿರುತ್ತದೆ. ಹೀಗಾಗಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ದೇಶಗಳಲ್ಲಿ ಒಟ್ಟು ಜಿಡಿಪಿ ಹೆಚ್ಚಿದ್ದರೂ ತಲಾದಾಯವು ಕೆಲವೊಮ್ಮೆ ಸಣ್ಣದೇಶಗಳಿಗಿಂತ ಕಡಿಮೆ ಇರಬಹುದು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

