ನ್ಯಾಯಾಲಯ ಕಲಾಪದ ವಿಡಿಯೊಗಳು ಸೋರಿಕೆಯಾಗಿರುವ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ವಕೀಲ ವಿಶಾಲ್ ಸಿಂಗ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿರುವ ಈ ವಿಡಿಯೊಗಳನ್ನು ತೆಗೆದುಹಾಕಬೇಕು ಎಂದು ಕೋರಿರುವ ಅರ್ಜಿದಾರರು, ಎಪ್ರಿಲ್ 13ರಂದು ನಡೆದ ನ್ಯಾಯಾಲಯ ಕಲಾಪದ ವಿಡಿಯೊವನ್ನು ಕೇಜ್ರಿವಾಲ್ ಹಾಗೂ ಅವರ ಸಹಚರರು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದೂ ಅವರು ದೂರಿದ್ದಾರೆ.
ನ್ಯಾಯಾಂಗವು ಕೆಲವು ರಾಜಕೀಯ ಪಕ್ಷಗಳು ಹಾಗೂ ಕೇಂದ್ರ ಸರ್ಕಾರದಿಂದ ಪ್ರಭಾವಿತವಾಗಿದೆ ಎಂದು ಜನರನ್ನು ದಾರಿ ತಪ್ಪಿಸಲು ಅರವಿಂದ್ ಕೇಜ್ರಿವಾಲ್ ಹಾಗೂ ಇನ್ನಿತರ ರಾಜಕಾರಣಿಗಳು ಪಿತೂರಿ ನಡೆಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ದಿಲ್ಲಿ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸ್ ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಪಕ್ಷಪಾತದ ಕುರಿತು ಗಂಭೀರ, ಪ್ರಾಮಾಣಿಕ ಹಾಗೂ ಸಕಾರಣ ಅನುಮಾನಗಳಿರುವುದರಿಂದ ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯಿಂದ ನ್ಯಾ. ಸ್ವರ್ಣ ಕಾಂತ ಶರ್ಮ ಸ್ವಯಂಪ್ರೇರಿತವಾಗಿ ಹಿಂದೆ ಸರಿಯಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದಿಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಇನ್ನಿತರ ಆಮ್ ಆದ್ಮಿ ಪಕ್ಷದ ನಾಯಕರು ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ನಡೆಸುತ್ತಿದೆ.
ಆದರೆ, ಅರವಿಂದ್ ಕೇಜ್ರಿವಾಲ್ ಅವರ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಸ್ವರ್ಣ ಕಾಂತ ಶರ್ಮ, ನ್ಯಾಯಾಂಗದ ಸಾಮರ್ಥ್ಯವನ್ನು ಅಳೆಯಲು ರಾಜಕಾರಣಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

