ಬಾಲಾಪರಾಧ ಕಾಯ್ದೆಯ ಶಾಸನಾತ್ಮಕ ಕಡ್ಡಾಯವು ಕೇವಲ ನಿಯಮ ಮಾತ್ರವಲ್ಲ; ಅದು ಸಂವಿಧಾನದ ವಿಧಿ 21ರ ಅಡಿ ನೀಡಲಾಗಿರುವ ಖಾತರಿಯನ್ನು ಮುಂದುವರಿಸುವುದಾಗಿದೆ ಎಂದು ನ್ಯಾ.ಜೆ.ಕೆ. ಮಾಹೇಶ್ವರಿ ಮತ್ತು ನ್ಯಾ. ಅತುಲ್ ಎಸ್. ಚಂದ್ರುಕರ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು.
"ಘೋಷಿತ ಬಾಲಾಪರಾಧಿಯನ್ನು ಸಾಮಾನ್ಯ ಜೈಲಿನಿಂದ ವೀಕ್ಷಣಾ ಗೃಹಕ್ಕೆ ತಕ್ಷಣವೇ ಸ್ಥಳಾಂತರಿಸುವುದನ್ನು ಖಾತರಿಪಡಿಸುವಲ್ಲಿ ತೋರುವ ಯಾವುದೇ ಬಗೆಯ ಲೋಪವು ಕೇವಲ ಶಾಸನದ ಉದ್ದೇಶವನ್ನಷ್ಟೇ ಉಲ್ಲಂಘಿಸುವುದಲ್ಲ; ಅದು ಬಾಲಾಪರಾಧಿಯ ಜೀವಿಸುವ ಹಕ್ಕಿನ ಗಂಭೀರ ಉಲ್ಲಂಘನೆಯಲ್ಲಿ ಅಂತ್ಯಗೊಳ್ಳುತ್ತದೆ" ಎಂದು ನ್ಯಾಯಪೀಠ ಹೇಳಿತು.
ಅವಳಿ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತಗೊಂಡಿರುವ ಬಾಲಾಪರಾಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು. ಈ ವೇಳೆ ಅರ್ಜಿದಾರನ ವಯಸ್ಸು 16ರಿಂದ 18 ವರ್ಷದೊಳಗಿದ್ದರೂ ಹಾಗೂ ಆತನನ್ನು ಬಾಲಾಪರಾಧಿ ಎಂದು ಘೋಷಿಸಿದ್ದರೂ, ಆತನನ್ನು ಸಾಮಾನ್ಯ ಜೈಲಿನಲ್ಲಿ ಇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ಅರ್ಜಿದಾರನು ಬಾಲಾಪರಾಧಿಯಾಗಿದ್ದರೂ, ಆತನನ್ನು ಎರಡೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಸಾಮಾನ್ಯ ಜೈಲಿನಲ್ಲಿ ಇರಿಸಿರುವುದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ತಪ್ಪಿಗಾಗಿ ಅರ್ಜಿದಾರ ಬಾಲಾಪರಾಧಿಗೆ 5 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ಸಮ್ಮತಿಸಿತು.

