ಬದಿಯಡ್ಕ: "ವಾಚನವೇ ಜ್ಞಾನಕ್ಕೆ ದಾರಿ, ಜ್ಞಾನವೇ ಯಶಸ್ಸಿಗೆ ಮೆಟ್ಟಿಲು" ಎಂಬ ಮಾತಿನಂತೆ ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠ ಶಾಲೆಯಲ್ಲಿ ಓದಿನ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಾಚನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನ ಹಾಗೂ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕಿರಿಯ ವಿಭಾಗದ ವಿದ್ಯಾರ್ಥಿಗಳಿಗೆ ಓದುವ ಸ್ಪರ್ಧೆ ನಡೆಸಲಾಯಿತು. ಹಿರಿಯ ಹಾಗೂ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಓದಿನ ಮಹತ್ವದ ಹಾಗೂ ವಾಚನಾ ದಿನದ ಕೇರಳದ ಗ್ರಂಥಾಲಯ ಚಳುವಳಿಯ ರೂವಾರಿ ಪಿ. ಎನ್. ಪಣಿಕ್ಕರ್ ಬಗ್ಗೆ ಕುರಿತು ಭಾಷಣಗಳನ್ನು ಮಾಡಿದರು. ಶಿಕ್ಷಕಿ ಪವಿತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿ ಶುಭ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿದರು. ವಿದ್ಯಾರ್ಥಿಗಳಲ್ಲಿ, ಓದುವ ಹವ್ಯಾಸ, ಜ್ಞಾನದ ಮಹತ್ವ ಹಾಗೂ ಪುಸ್ತಕಗಳ ಮೇಲಿನ ಪ್ರೀತಿಯನ್ನು ಬೆಳೆಸುವ ಉದ್ದೇಶದಿಂದ ನಡೆಸಿದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ವಾಚನ ದಿನದ ಅಂಗವಾಗಿ ಆಯೋಜಿಸಲಾದ ವಾಚನ ವಾರವು ಒಂದು ವಾರದವರೆಗೆ ವಿವಿಧ ಚಟುವಟಿಕೆಗಳೊಂದಿಗೆ ಮುಂದುವರಿಯಲಿದೆ.

.jpg)


