ನವದೆಹಲಿ: ರಷ್ಯಾದಿಂದ ಬಹುನಿರೀಕ್ಷಿತ 'ಎಸ್-400 ಟ್ರಯಂಫ್' ಕ್ಷಿಪಣಿಯ ವ್ಯವಸ್ಥೆಯ ನಾಲ್ಕನೇ ಘಟಕವು ಮೇ ಆರಂಭದಲ್ಲಿ ಭಾರತಕ್ಕೆ ತಲುಪಲಿದೆ ಎಂದು ವರದಿಯಾಗಿದೆ. ಇದರಿಂದ ಭಾರತೀಯ ವಾಯುಪಡೆಗೆ ಮತ್ತೊಂದು ಆನೆಬಲ ಬಂದಂತಾಗಿದೆ.
ಕ್ಷಿಪಣಿ ವ್ಯವಸ್ಥೆಯ ನಾಲ್ಕನೇ ಘಟಕವನ್ನು ರಷ್ಯಾ ಈಗಾಗಲೇ ರವಾನಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ಬಂದು ತಲುಪುವ ನಿರೀಕ್ಷೆಯಿದೆ.
ಇದರ ಬೆನ್ನಲ್ಲೇ ಕಳೆದ ತಿಂಗಳು ಭಾರತವು ಹೆಚ್ಚುವರಿಯಾಗಿ 5 ಹೊಸ ಎಸ್-400 ಕ್ಷಿಪಣಿ ವ್ಯವಸ್ಥೆಗಳ ಖರೀದಿಗೆ ಒಪ್ಪಿಗೆ ನೀಡಿದ್ದು, ಇದರಿಂದ ಭಾರತದ ಬಳಿ ಇರುವ ಒಟ್ಟು ಕ್ಷಿಪಣಿ ವ್ಯವಸ್ಥೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ.
2018ರ ಅಕ್ಟೋಬರ್‌ನಲ್ಲಿ 5 ಘಟಕಗಳ ಪೂರೈಕೆಗಾಗಿ ರಷ್ಯಾದೊಂದಿಗೆ ಭಾರತ 5 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಪೈಕಿ ಈಗಾಗಲೇ 3 ಘಟಕಗಳು ಭಾರತದ ಬತ್ತಳಿಕೆ ಸೇರಿವೆ. ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಪೂರೈಸಲು ನವೆಂಬರ್ ವೇಳೆಗೆ ಕ್ಷಿಪಣಿಯ ಐದನೇ ಘಟಕವನ್ನು ತಲುಪಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಅಮೆರಿಕದ 'ಕಾಟ್ಸಾ' (CAATSA) ಕಾಯ್ದೆಯಡಿ ನಿರ್ಬಂಧ ಹೇರುವ ಎಚ್ಚರಿಕೆಯ ಹೊರತಾಗಿಯೂ ಭಾರತ ಈ ರಕ್ಷಣಾ ಒಪ್ಪಂದವನ್ನು ಮುಂದುವರಿಸಿದೆ. ಹೊಸದಾಗಿ ನೀಡಲಾಗಿರುವ 5 ಘಟಕಗಳ ಆದೇಶವು ಹಳೆಯ ಒಪ್ಪಂದದ ಮುಂದುವರಿದ ಭಾಗವಾಗಿರುವುದರಿಂದ, ಅಮೆರಿಕದ ನಿರ್ಬಂಧಗಳಿಂದ ಯಾವುದೇ ತೊಂದರೆಯಾಗದು ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಎಸ್-400 ಕ್ಷಿಪಣಿ ವ್ಯವಸ್ಥೆಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದವು. ಮೇ 7ರಿಂದ 10ರ ನಡುವೆ ಪಾಕಿಸ್ತಾನದೊಂದಿಗೆ ನಡೆದ ಮಿಲಿಟರಿ ಸಂಘರ್ಷದ ವೇಳೆ ಭಾರತೀಯ ವಾಯುಪಡೆಯು ಈ ಕ್ಷಿಪಣಿ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಿಕೊಂಡಿತ್ತು. ಈ ಸಂಘರ್ಷ ನಡೆದ ಕೆಲವೇ ವಾರಗಳಲ್ಲಿ ಹೆಚ್ಚುವರಿ ಕ್ಷಿಪಣಿ ವ್ಯವಸ್ಥೆ ಖರೀದಿಯ ಪ್ರಸ್ತಾವನೆಗೆ ಚಾಲನೆ ನೀಡಲಾಗಿತ್ತು.
ರಷ್ಯಾದ ಅತ್ಯಂತ ಸುಧಾರಿತ ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಈ ಕ್ಷಿಪಣಿ ವ್ಯವಸ್ಥೆಯನ್ನು ನಿರ್ವಹಿಸಲು ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಈಗಾಗಲೇ ರಷ್ಯಾದಲ್ಲಿ ತರಬೇತಿ ನೀಡಲಾಗಿದೆ. ಎದುರಾಳಿ ರಾಷ್ಟ್ರಗಳ ವಿಮಾನ, ಡ್ರೋನ್ ಮತ್ತು ಕ್ಷಿಪಣಿಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

