HEALTH TIPS

ಡಿಜಿಟಲ್ ಅರೆಸ್ಟ್‌ ಹಗರಣಗಳಲ್ಲಿ ಭಾಗಿಯಾಗಿದ್ದ 9,400 ಖಾತೆಗಳನ್ನು ವಾಟ್ಸ್ ಆಯಪ್ ನಿಷೇಧಿಸಿದೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಹೆಚ್ಚುತ್ತಿರುವ ಡಿಜಿಟಲ್ ಬಂಧನ ಹಗರಣಗಳ ಪಿಡುಗನ್ನು ಎದುರಿಸಲು ದೂರಸಂಪರ್ಕ ನಿಯಂತ್ರಕರು, ಟೆಲಿಕಾಂ ಕಂಪೆನಿಗಳು, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸಿಬಿಐ ಅನ್ನು ಒಳಗೊಂಡ ಬಹುಮುಖಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಇಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದ 9,400 ಖಾತೆಗಳನ್ನು ವಾಟ್ಸ್ ಆಯಪ್ ನಿಷೇಧಿಸಿದೆ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಮೂಲಗಳ ಪ್ರಕಾರ ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್‌ ಪ್ರಕರಣಗಳನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯದ ಫೆ.9ರ ನಿರ್ದೇಶನಗಳಿಗೆ ಅನುಗುಣವಾಗಿ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಸಲ್ಲಿಸಿರುವ ಸಮಗ್ರ ಸ್ಥಿತಿಗತಿ ವರದಿಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಲಾಗಿದೆ.

ಡಿಜಿಟಲ್ ಬಂಧನಗಳು ಸೇರಿದಂತೆ ಆನ್ಲೈನ್ ವಂಚನೆಗಳ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠವು ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು. ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಪರಿಹಾರವನ್ನು ಒದಗಿಸಲು ಮಾರ್ಗಸೂಚಿಯನ್ನು ರೂಪಿಸಲು ಜಂಟಿ ಸಭೆಯನ್ನು ನಡೆಸುವಂತೆ ಆರ್ಬಿಐ, ದೂರಸಂಪರ್ಕ ಇಲಾಖೆ (ಡಿಟಿಒ) ಮತ್ತು ಇತರರಿಗೆ ಸೂಚನೆಯು ಈ ನಿರ್ದೇಶನಗಳಲ್ಲಿ ಒಳಗೊಂಡಿತ್ತು.

ಇದೀಗ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರ ಮೂಲಕ ಸಲ್ಲಿಸಲಾಗಿರುವ ಹೊಸ ಸ್ಥಿತಿಗತಿ ವರದಿಯಲ್ಲಿ ಈ ವರ್ಷದ ಜನವರಿಯಿಂದ ಕಳೆದ 12 ವಾರಗಳಲ್ಲಿ ವಾಟ್ಸ್‌ಆಯಪ್ ಕೈಗೊಂಡಿರುವ ಜಾರಿಕ್ರಮಗಳನ್ನು ವಿವರಿಸಲಾಗಿದೆ.

ವಾಟ್ಸ್ ಆಯಪ್ ಜನವರಿ 2026ರಲ್ಲಿ ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡ ಡಿಜಿಟಲ್ ಬಂಧನ ಹಗರಣಗಳನ್ನು ನಿರ್ದಿಷ್ಟವಾಗಿ ಕೇಂದ್ರೀಕರಿಸಿ ರಚನಾತ್ಮಕ ತನಿಖೆಯನ್ನು ಆರಂಭಿಸಿತ್ತು ಮತ್ತು ಡಿಜಿಟಲ್ ಬಂಧನಗಳಲ್ಲಿ ಭಾಗಿಯಾದ ಆರೋಪದಲ್ಲಿ 9,400 ಖಾತೆಗಳನ್ನು ನಿಷೇಧಿಸಿದೆ ಎಂದು ವರದಿಯು ತಿಳಿಸಿದೆ.

ಬಳಕೆದಾರರ ಹೆಚ್ಚಿನ ರಕ್ಷಣೆಗಾಗಿ ವಾಟ್ಸ್‌ಆಯಪ್ ಹಲವಾರು ನವೀನ ಕ್ರಮಗಳನ್ನು ಕೈಗೊಳ್ಳುತ್ತಿದ್ದು,ಇದರಲ್ಲಿ 'ಲೋಗೊ ಡಿಟೆಕ್ಷನ್'ಕೂಡ ಸೇರಿದೆ. ಇದರಡಿ ಡಿಸ್ಪ್ಲೇ ಪಿಕ್ಚರ್ಗಳಲ್ಲಿ ಅಧಿಕೃತ ಪೋಲಿಸ್ ಅಥವಾ ಸರಕಾರಿ ಲಾಂಛನಗಳನ್ನು ಬಳಸಿಕೊಂಡಿರುವ ಖಾತೆಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಲಾಗುತ್ತದೆ ಎಂದು ಸ್ಥಿತಿಗತಿ ವರದಿಯಲ್ಲಿ ತಿಳಿಸಲಾಗಿದೆ.

ಸ್ಕ್ಯಾಮ್ ಪ್ರೊಫೈಲ್‌ಗಳ ಸಾಮಾನ್ಯ ಲಕ್ಷಣವಾಗಿರುವ ಹೊಸದಾಗಿ ರಚಿಸಲಾದ ಅಥವಾ ಬಳಕೆಯ ಇತಿಹಾಸವಿಲ್ಲದ ಖಾತೆಯಿಂದ ಬಳಕೆದಾರರಿಗೆ ಕರೆ ಬಂದಾಗ ಅವರಿಗೆ ಎಚ್ಚರಿಕೆ ನೀಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ವಾಟ್ಸ್‌ಆಯಪ್ ಚಿಂತನೆ ನಡೆಸುತ್ತಿದೆ ಎಂದು ಸ್ಥಿತಿಗತಿ ವರದಿಯು ತಿಳಿಸಿದೆ.

ಶಂಕಿತ ಸಿಮ್ ಕಾರ್ಡ್ಗಳನ್ನು ಗುರುತಿಸಿದ 2-3 ಗಂಟೆಗಳಲ್ಲಿಯೇ ಅವುಗಳನ್ನು ನಿರ್ಬಂಧಿಸುವ ಕಾರ್ಯವಿಧಾನ ಸೇರಿದಂತೆ ವಂಚಕ ಸಿಮ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಕಟ್ಟುನಿಟ್ಟಿನ ಹೊಸ ಕಾಲಮಿತಿಗೆ ಡಿಒಟಿ ಮತ್ತು ಟೆಲಿಕಾಂ ಕಂಪೆನಿಗಳು ಬದ್ಧವಾಗಿವೆ ಎಂದು ತಿಳಿಸಿರುವ ವರದಿಯು, ಡಿಜಿಟಲ್ ಬಂಧನ ತನಿಖೆಗಳನ್ನು ಕೈಗೆತ್ತಿಕೊಳ್ಳಲು ಸಿಬಿಐ 10 ಕೋಟಿ.ರೂ.ನಷ್ಟದ ಕನಿಷ್ಠ ಮಿತಿಯನ್ನು ನಿಗದಿಗೊಳಿಸಿದೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries