ಜಾಮ್ ನಗರ: ಕೊಲಂಬಿಯಾದಲ್ಲಿ ಸಂಕಷ್ಟದಲ್ಲಿರುವ 80 ನೀರಾನೆಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಸ್ಥಳಾಂತರಿಸಿ, ಆಜೀವ ಪರ್ಯಂತ ಕಾಳಜಿ ಮಾಡಲು ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರ ಮುಂದಾಗಿದೆ.
ಈ ಬಗ್ಗೆ ವಂತಾರದ ಸ್ಥಾಪಕರು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೊಲಂಬಿಯಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೊಲಂಬಿಯಾದ ಮಗ್ದಲಿನಾ ನದಿ ಪಾತ್ರದಲ್ಲಿರುವ 80 ನೀರಾನೆಗಳ ಹತ್ಯೆಗೆ ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಬೆನ್ನಲ್ಲೇ, ಕೊಲಂಬಿಯಾದ ಪರಿಸರ ಹಾಗೂ ಸುಸ್ಥಿರ ಅಭಿವೃದ್ಧಿ ಸಚಿವ ವೆಲೆಜ್ ಟೊರೆಸ್ ಅವರಿಗೆ ಪತ್ರ ಬರೆದಿರುವ ಅನಂತ್ ಅವರು, 'ಈ ನಿರ್ಧಾರವನ್ನು ತಡೆಹಿಡಿದು, ಮಾನವೀಯ ನೆಲೆಯಲ್ಲಿ ಪರ್ಯಾಯ ಮಾರ್ಗವನ್ನು ಆಲೋಚಿಸಿ' ಎಂದು ಮನವಿ ಮಾಡಿದ್ದಾರೆ.
80 ನೀರಾನೆಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ಸ್ಥಳಾಂತರ ಮಾಡಿ, ಗುಜರಾತ್ನ ಜಾಮ್ ನಗರದಲ್ಲಿರುವ ವಂತಾರದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. 'ಈ ಕಾರ್ಯದ ಹಂತದಲ್ಲೂ ಕೊಲಂಬಿಯಾದ ಅಧಿಕಾರಿಗಳಿಂದ ಅನುಮತಿ ದೊರಕಿಸಿಕೊಡಬೇಕು' ಎಂದೂ ವಿನಂತಿಸಿದ್ದಾರೆ.
ನೀರಾನೆಗಳ ರಕ್ಷಣೆ ಯಾಕೆ?: ಕೊಲಂಬಿಯಾದ ಮಗ್ದಲಿನಾ ನದಿ ಪಾತ್ರದಲ್ಲಿ ಅಂದಾಜು ಇನ್ನೂರು ನೀರಾನೆಗಳಿವೆ. ಅವುಗಳ ಸಂತತಿ ವೇಗವಾಗಿ ಬೆಳೆಯುತ್ತಿದೆ. ಅದರಿಂದ ಆಗುತ್ತಿರುವ ಜೀವವೈವಿಧ್ಯತೆ ನಷ್ಟ ಮತ್ತು ಪರಿಸರ ವ್ಯವಸ್ಥೆಯ ಹಾನಿ ಮತ್ತು ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಕೊಲಂಬಿಯಾದ ಅಧಿಕಾರಿಗಳು ಆ ಪ್ರಭೇದವನ್ನು 'ಆಕ್ರಮಣಕಾರಿ' ಎಂದು ಪರಿಗಣಿಸಿದ್ದಾರೆ.
ಕೊಲಂಬಿಯಾದಲ್ಲಿ ಸಂಕಷ್ಟದಲ್ಲಿರುವ ನೀರಾನೆ

