HEALTH TIPS

ಶಿಕ್ಷಣ ಹಕ್ಕು ಕಾಯ್ದೆಯಡಿ ಕಡ್ಡಾಯ ಪ್ರವೇಶಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

 ನವದೆಹಲಿ: ಬಡವರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಜಾರಿಗೆ ತಂದಿರುವ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಮಕ್ಕಳ ಕಡ್ಡಾಯ ಪ್ರವೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಪೂರ್ವ ಪ್ರಾಥಮಿಕ ಶಾಲೆಗೆ ಮಕ್ಕಳ ಸೇರ್ಪಡೆಯನ್ನು 'ರಾಷ್ಟ್ರೀಯ ಯೋಜನೆ'ಯಾಗಿ ಪರಿಗಣಿಸಬೇಕು ಎಂದು ಮಂಗಳವಾರ ಹೇಳಿದೆ. 


ರಾಜ್ಯ ಸರ್ಕಾರದ ಮೂಲಕ ಹಂಚಿಕೆಯಾದ ಮಕ್ಕಳಿಗೆ ಆರ್‌ಟಿಇ ಅಡಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಯಾವುದೇ ವಿಳಂಬವಿಲ್ಲದೆ ಪ್ರವೇಶಾತಿ ಕಲ್ಪಿಸಲು 'ನೆರೆಯ ಶಾಲೆ'ಗಳು ಸಾಂವಿಧಾನಿಕವಾಗಿ ಬದ್ಧವಾಗಿವೆ ಎಂದು ತೀರ್ಪು ನೀಡಿದೆ.

ಮಕ್ಕಳಿಗೆ ಪ್ರವೇಶ ನಿರಾಕರಿಸುವುದು ಸಂವಿಧಾನದ 21 (ಎ) ವಿಧಿ ಅಡಿಯಲ್ಲಿ ಖಾತರಿ ಪಡಿಸಲಾದ ಶಿಕ್ಷಣದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠ ಹೇಳಿತು.

'2009ರ ಆರ್‌ಟಿಇ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ 'ನೆರೆಯ ಶಾಲೆ'ಗಳು ಸಮಾಜದ ಬಡ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಶೇಕಡ 25ರಷ್ಟು ಸೀಟುಗಳನ್ನು ಮೀಸಲಿಡ ಬೇಕು. ಈ ನಿಯಮವು ನಮ್ಮ ಸಮಾಜದಲ್ಲಿ ಬದಲಾವಣೆ ತರುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ' ಎಂದು ಪೀಠ ಅಭಿಪ್ರಾಯ ಪಟ್ಟಿತು.

'ಅಂತಹ ವಿದ್ಯಾರ್ಥಿಗಳ ಪ್ರವೇಶ ವನ್ನು ಖಾತರಿಪಡಿಸಿಕೊಳ್ಳುವುದು ಸರ್ಕಾರ, ಸ್ಥಳೀಯ ಪ್ರಾಧಿಕಾರದ ಬಾಧ್ಯತೆಯಾಗಿರಬೇಕು. ಶಿಕ್ಷಣ ಹಕ್ಕಿನ ನಿರಾಕರಣೆ ಕುರಿತ ದೂರಿನೊಂದಿಗೆ ಬರುವ ಪೋಷಕರಿಗೆ ಪರಿಹಾರವನ್ನು ಒದಗಿಸಲು ಕೋರ್ಟ್‌ಗಳು ಹೆಚ್ಚು ಆಸಕ್ತಿ ವಹಿಸ ಬೇಕು' ಎಂದು ತೀರ್ಪನ್ನು ಬರೆದ ನ್ಯಾಯಮೂರ್ತಿ ನರಸಿಂಹ ಹೇಳಿದರು.

ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ನಿರ್ದೇಶಿಸಿದ ಹೈಕೋರ್ಟ್ ಆದೇಶ ವನ್ನು ಪ್ರಶ್ನಿಸಿ, ಲಖನೌ ಪಬ್ಲಿಕ್ ಸ್ಕೂಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ವಜಾಗೊಳಿಸಿತು.

2024-25ರ ಶೈಕ್ಷಣಿಕ ವರ್ಷದಲ್ಲಿ ಉತ್ತರ ಪ್ರದೇಶ ಸರ್ಕಾರ ಹಂಚಿಕೆ ಮಾಡಿದ ವಿದ್ಯಾರ್ಥಿಯನ್ನು ಸೇರಿಸಿ ಕೊಳ್ಳಲು ಲಖನೌ ಪಬ್ಲಿಕ್‌ ಸ್ಕೂಲ್ ನಿರಾಕರಿಸಿತ್ತು. ವಿದ್ಯಾರ್ಥಿಯ ಪೋಷಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌, ವಿದ್ಯಾರ್ಥಿಯ ಪರ ತೀರ್ಪು ನೀಡಿತ್ತು. ಶಾಲೆಯ ಆಡಳಿತ ಮಂಡಳಿ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries