ದುಬೈ: ಇರಾನ್‌ನಿಂದ ಹೊರಟ ಸರಕು ಸಾಗಣೆ ಹಡಗಿನ ಮೇಲೆ ಬುಧವಾರ ಗುಂಡು ಹಾರಿಸಲಾಗಿದ್ದು, ಆ ಹಡಗು ಸಮುದ್ರದಲ್ಲಿ ನಿಂತಲ್ಲೇ ನಿಂತಿದೆ ಎಂದು ಬ್ರಿಟಿಷ್ ಕಡಲ ಸಂಸ್ಥೆಯೊಂದು ವರದಿ ಮಾಡಿದೆ.
'ಇರಾನ್‌ನಿಂದ ಹೊರಹೋಗುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಗುಂಡು ಹಾರಿಸಲಾಗಿದೆ ಎಂದು ವರದಿ ತಿಳಿಸಿದೆ. ಈಗ ಅದು ನೀರಲ್ಲಿ ನಿಂತಲ್ಲೇ ನಿಂತಿದೆ. ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಹಡಗಿಗೆ ಯಾವುದೇ ಹಾನಿಯಾಗಿಲ್ಲ' ಎಂದು ಬ್ರಿಟನ್‌ನ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಈ ಘಟನೆ ಇರಾನ್‌ನ ಪಶ್ಚಿಮಕ್ಕೆ ಎಂಟು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ನಡೆದಿದೆ ಎಂದು ಅದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್, ಶತ್ರುಗಳಿಗೆ ತಕ್ಕ ಉತ್ತರ ನೀಡುವುದಾಗಿ ಗುಡುಗಿದೆ. ಅಮೆರಿಕ ನೆಲೆಗಳ ಮೇಲೂ ದಾಳಿ ನಡೆಸುವ ಎಚ್ಚರಿಕೆ ಕೊಟ್ಟಿದೆ.
ಇತ್ತ, ಹೊರ್ಮುಜ್ ಜಲಸಂಧಿಯಲ್ಲಿ ತನ್ನ ಎಚ್ಚರಿಕೆ ಮೀರಿ ಮುನ್ನುಗ್ಗುತಿದ್ದ ಹಡಗಿನ ಮೇಲೆ ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಗುಂಡಿನ ದಾಳಿ ನಡೆಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನಿರ್ದಿಷ್ಟಾವಧಿಗೆ ಕದನ ವಿರಾಮ ಘೋಷಿಸಿದ್ದರೂ ಗುಂಡಿನ ಚಕಮಕಿ ನಿಲ್ಲದೇ ಇರುವುದು ಎರಡನೇ ಸುತ್ತಿನ ಮಾತುಕತೆ ಬಗ್ಗೆ ಸಂಶಯ ಮೂಡಿಸಿದೆ.

