ಟೆಹರಾನ್: ಇಸ್ಲಮಾಬಾದ್‍ನಲ್ಲಿ ಅಮೆರಿಕ-ಇರಾನ್ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಯ ಸಂದರ್ಭ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‍ಗೆ ಮಾಡಿದ ಫೋನ್ ಕರೆ ಮಾತುಕತೆಯ ಹಳಿತಪ್ಪಿಸಿತು ಎಂದು ಇರಾನ್ ಸೋಮವಾರ ಪ್ರತಿಪಾದಿಸಿದೆ.
ಮಾತುಕತೆ ಸುಸೂತ್ರವಾಗಿ ಸಾಗಿತ್ತು. ಆ ಸಂದರ್ಭದಲ್ಲಿ ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರಿಂದ ಜೆ.ಡಿ.ವ್ಯಾನ್ಸ್‍ಗೆ ಬಂದ ಫೋನ್ ಕರೆ ಮಾತುಕತೆಯ ದಿಕ್ಕನ್ನು ಬದಲಿಸಿತು. ಇರಾನ್-ಅಮೆರಿಕದ ನಡುವಿನ ಮಾತುಕತೆ ಇಸ್ರೇಲ್ ಹಿತಾಸಕ್ತಿಗೆ ಆದ್ಯತೆ ನೀಡುವತ್ತ ತಿರುಗಿತು ಮತ್ತು ಮಾತುಕತೆಯ ಹಳಿ ತಪ್ಪಿಸಿತು. ಅಮೆರಿಕ ಯುದ್ಧ ಭೂಮಿಯಲ್ಲಿ ಸಾಧಿಸಲು ವಿಫಲವಾಗಿರುವುದನ್ನು ಸಂಧಾನ ಪ್ರಕ್ರಿಯೆಯಲ್ಲಿ ಗಳಿಸಿಕೊಳ್ಳಲು ಅಮೆರಿಕ ಮುಂದಾಯಿತು' ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿಯನ್ನು ಉಲ್ಲೇಖಿಸಿ ಇರಾನ್‍ನ ʼಪ್ರೆಸ್ ಟಿವಿʼ ವರದಿ ಮಾಡಿದೆ.
ಅಮೆರಿಕ ಮುಂದಿರಿಸಿದ್ದ ಅಂತಿಮ ಮತ್ತು ಅತ್ಯುತ್ತಮ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದ್ದರಿಂದ ಮಾತುಕತೆ ವಿಫಲಗೊಂಡಿತ್ತು ಎಂದು ಮಾತುಕತೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದರು. ಪರಮಾಣು ಕಾರ್ಯಕ್ರಮಗಳನ್ನು ಕೈಬಿಡಲು ಇರಾನ್ ನಿರಾಕರಿಸಿದ್ದರಿಂದ ಮಾತುಕತೆ ವಿಫಲಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದರು.
ಹಲವು ವಾರಗಳ ಹಗೆತನದ ನಂತರ ಆಳವಾದ ಅಪನಂಬಿಕೆ ಮಾತುಕತೆಗೆ ಪ್ರಮುಖ ಅಡಚಣೆಯಾಗಿತ್ತು. ಯುದ್ಧ ಮತ್ತು ಸಂದೇಹದಿಂದ ರೂಪುಗೊಂಡ ವಾತಾವರಣದಲ್ಲಿ ಮಾತುಕತೆಗಳು ನಡೆದವು ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದು, ಒಂದೇ ಹಂತದಲ್ಲಿ ಪ್ರಗತಿ ಅಸಂಭವವಾಗಿದ್ದು ಭವಿಷ್ಯದ ರಾಜತಾಂತ್ರಿಕ ಪ್ರಯತ್ನಗಳಿಗೆ ಇರಾನ್ ಮುಕ್ತವಾಗಿದೆ ಎಂದಿದ್ದಾರೆ.
ಹೇಳಿಕೆ ನಿರಾಕರಿಸಿದ ನೆತನ್ಯಾಹು:
ತಾನು ಮಾಡಿದ ಫೋನ್ ಕರೆ ಶಾಂತಿ ಮಾತುಕತೆಯ ಹಳಿ ತಪ್ಪಿಸಿದೆ ಎಂಬ ಇರಾನ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ನಿರಾಕರಿಸಿದ್ದು, ಮಾತುಕತೆಯ ನಿಯಮಗಳನ್ನು ಇರಾನ್ ಉಲ್ಲಂಘಿಸಿದ್ದರಿಂದ ಅಮೆರಿಕ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ಪ್ರತಿಪಾದಿಸಿದ್ದಾರೆ.

